ಗೃಹ ಖಾತೆ ಬದಲಿಸಿ ಅಥವಾ ರಾಜೀನಾಮೆ ಸ್ವೀಕರಿಸಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸ್ಪಷ್ಟವಾಗಿ ಕೇಳುತ್ತಿದ್ದರೂ ಅವರ ಖಾತೆ ಯಾಕೆ ಬದಲಾವಣೆ ಮಾಡುತ್ತಿಲ್ಲ ಸಿಎಂ ಸಿದ್ದರಾಮಯ್ಯ ನವರೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಗೃಹ ಇಲಾಖೆ ಸಹವಾಸ ಸಾಕು, ಖಾತೆ ಬದಲಿಸಿ ಎಂದು ಪರಮೇಶ್ವರ್ ಅವರು ಸಿಎಂ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ವರದಿಯೊಂದನ್ನು ಟ್ವೀಟ್ ಮಾಡಿರುವ ಅಶೋಕ್, “ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಖಾತೆ ನಿರ್ವಹಣೆ ಮಾಡಬಲ್ಲ ಸಮರ್ಥರು, ಯೋಗ್ಯರು ಬೇರೆ ಯಾರೂ ಇಲ್ಲವೇ” ಎಂದು ಕೇಳಿದ್ದಾರೆ.
ಗೃಹ ಇಲಾಖೆ ಸಹವಾಸ ಸಾಕು ಎಂದಿರುವ ಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಖಾತೆ ಬದಲಿಸಿ. ಇಲ್ಲವಾದರೆ ರಾಜೀನಾಮೆ ಸ್ವೀಕರಿಸಿ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ವಿಜಯೋತ್ಸವದ ಸುತ್ತ ನಡೆದ ಘಟನಾವಳಿ ಕಾರಣ ಖಾತೆ ಬದಲಿಸುವಂತೆ ಸಿಎಂ ಹಾಗೂ ಹೈಕಮಾಂಡ್ ಬಳಿ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಪರಮೇಶ್ವರ್ ಅವರಿಗೆ ಕಿವಿಮಾತು ಹೇಳಿದ್ದಾರೆ.