ಒಳಮೀಸಲಾತಿ ವಿಚಾರ ತಾರ್ಕಿಕ ಅಂತ್ಯದ ಕಡೆ ಸಾಗುವಂತೆ ಕಾಣುತ್ತಿದೆ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ ಗುರುವಾರ (ಮಾ.27) ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ನಾಗಮೋಹನ್ ದಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒಳಮೀಸಲಾತಿ ಕಲ್ಪಿಸುವ ಕುರಿತ ಅಧ್ಯಯನದ ಮಧ್ಯಂತರ ವರದಿಯನ್ನು ಒಪ್ಪಿಸಿದರು.
ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನವೆಂಬರ್ ತಿಂಗಳಿನಲ್ಲಿಯೇ ರಚಿಸಲಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ಆಯೋಗಕ್ಕೆ ಹೊಣೆ ನಿಗದಿಪಡಿಸಲಾಗಿತ್ತು.
ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ದ ಒಳ ಮೀಸಲಾತಿ ನೀಡುವ ಕುರಿತು ಪರಿಶೀಲಿಸಿ ಆಯೋಗ ವರದಿ ನೀಡಿದೆ. ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳ ಮೀಸಲಾತಿ (ಉಪ ವರ್ಗೀಕರಣ)ಜಾರಿ ಕುರಿತು ಹೋರಾಟ ಆರಂಭವಾಗಿ ಸುಮಾರು ಐದು ದಶಕಗಳೇ ಸಂದಿವೆ. ಆದರೂ ಒಳಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯದಲ್ಲೂ ಒಳಮೀಸಲಾತಿ ಜಾರಿ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವಿಳಂಬ ಆಗುತ್ತಿದ್ದು, ಈ ವಿಚಾರದಲ್ಲಿ ಎಡಗೈ-ಬಲಗೈ ಎಂಬ ಅಪಸ್ವರ ಎತ್ತದೆ ಎಲ್ಲರೂ ಸಾಮೂಹಿಕವಾಗಿ ಕುಳಿತು ಚರ್ಚಿಸಿದ್ದಾರೆ. ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ನಿರ್ಧರಿಸಿದ್ದಾರೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ನಿವಾಸದಲ್ಲಿ ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ಹಾಗೂ ಕೆಲವು ಮುಖಂಡರು ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ.
ಅತ್ತ ಗೃಹ ಸಚಿವ ಜಿ. ಪರಮೇಶ್ವರ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ದರ್ಶನ್ ಧ್ರುವನಾರಾಯಣ, ಎನ್. ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯ ಎಚ್.ಪಿ. ಸುಧಾಮ್ ದಾಸ್, ಡಾ.ಡಿ. ತಿಮ್ಮಯ್ಯ ಮುಂತಾದವರು ಸಭೆ ಸೇರಿ ಚರ್ಚಿಸಿದ್ದಾರೆ.