ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರಧನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ತಾಣದಲ್ಲಿ ನುಡಿ ನಮನ ಸಲ್ಲಿಸಿ, “ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
“ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ” ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಚೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನವೆಂಬರ್ 22ರಂದು ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ನಾಲ್ವರು ಹುತಾತ್ಮರಾಗಿದ್ದರು.
‘ಇಂಟೆಲಿಜೆನ್ಸ್ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ ಎಂದು ಹೇಳಿದ್ದ ಪ್ರಾಂಜಲ್, ನಿವೇನೂ ಕರೆ ಮಾಡಬೇಡಿ ನಾನೇ ಮೆಸೇಜ್ ಅಥವಾ ಕರೆ ಮಾಡುತ್ತೇನೆ ಎಂದಿದ್ದ. ಆಲ್ ಓಕೆ ಎಂಬ ಸಂದೇಶ ಬರುತ್ತಿತ್ತು. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆಲ್ ಓಕೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದ್ದಾನೆ’ ಎಂದು ಮಗನ ಕೊನೆ ಸಂದೇಶ ತಂದೆ ವೆಂಕಟೇಶ್ ಹೇಳಿದ್ದಾರೆ.