ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ರಚಿಸಲಾದ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೀವ್ರ ಅನ್ಯಾಯ ಆಗಿದೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಂದು ಹಾಕಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪರವಾಗಿ ಧ್ವನಿ ಎತ್ತಿದರು.
ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ದ್ರೋಹ, ವಂಚನೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, “ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ” ಎಂದರು.
*ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ತಿವೆ. ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ನಮಗೇ ಏಕೆ ಈ ಮಟ್ಟದ ಅನ್ಯಾಯ? 4,30,000 ಕೋಟಿ ರೂ. ಕನ್ನಡಿಗರು ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ 50,000 ಕೋಟಿ ಮಾತ್ರ. ಅಂದರೆ ನಾವು ಕೊಡುವ ಪ್ರತಿ 100 ರೂ ನಲ್ಲಿ 13 ರೂ ಮಾತ್ರ ನಮಗೆ ವಾಪಾಸ್ ಬರುತ್ತಿದೆ. ಇದಕ್ಕಿಂತ ಭೀಕರ ಅನ್ಯಾಯ ಏನಿದೆ? ಈ ಅನ್ಯಾಯವನ್ನು ನಾವು ಸಹಿಸಬೇಕಾ” ಎಂದು ಪ್ರಶ್ನಿಸಿದರು.
62,098 ಕೋಟಿ ರೂ ನಮಗೆ ತೆರಿಗೆಯೊಂದರಲ್ಲೇ ನಮಗೆ ಅನ್ಯಾಯ
“15 ನೇ ಹಣಕಾಸು ಆಯೋಗದಿಂದಾಗಿ ನಮಗೆ 62,098 ಕೋಟಿ ರೂ ನಮಗೆ ತೆರಿಗೆಯೊಂದರಲ್ಲೇ ನಮಗೆ ಅನ್ಯಾಯ ಆಗಿದೆ. ಇದನ್ನು ನಾವು ಪ್ರಶ್ನಿಸಬಾರದಾ? ಈ ಕಾರಣಗಳಿಗೆ ನಾವು ಪ್ರತಿಭಟಿಸುತ್ತಿದ್ದೇವೆ. ಆದರೆ ಬಿಜೆಪಿ ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹವನ್ನು ಮರೆ ಮಾಚಲು ನೋಡುತ್ತಿದೆ” ಎಂದು ಟೀಕಿಸಿದರು.
“ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಆದರೆ ರಾಜ್ಯದ ಪಾಲಿನ ತೆರಿಗೆ ಪಾಲು ಅರ್ಧಕ್ಕಿಂತ ಕಡಿಮೆ ಆಗಿದೆ. ನಮ್ಮ ಪಾಲು ದುಪ್ಪಟ್ಟಾಗಬೇಕಾದ ಜಾಗದಲ್ಲಿ ಅರ್ಧಕ್ಕಿಂತ ಕಡಿಮೆ ಆಗಿರುವುದು ಅನ್ಯಾಯ ಅಲ್ಲವೇ? ಜಿಎಸ್‌ಟಿಯಲ್ಲಿ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಇನ್ನೂ ಬೃಹತ್ತಾಗಿದೆ. ಈಗ ಪರಿಹಾರ ಕೊಡುತ್ತಿಲ್ಲ. ಇದರಿಂದ 59000 ಕೋಟಿಗೂ ಅಧಿಕ ಅನ್ಯಾಯ, ವಂಚನೆ ಆಯಿತು” ಎಂದರು.
ಕೇಂದ್ರದ ಮಲತಾಯಿ ಧೋರಣೆ
“ಕೇಂದ್ರದ ನಿರಂತರ ದ್ರೋಹ, ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ 15% ನಿಂದ ಕೆಳಗೆ ಜಾರಿ 9% ಗೆ ಕುಸಿದಿದೆ. ಈ ದೊಡ್ಡ ಕುಸಿತಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ. ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಕೋಲೆ ಬಸವನ ರೀತಿಯಲ್ಲಿ ಮೋದಿ ಅವರ ಎದುರಿಗೆ ತಲೆ ಅಲ್ಲಾಡಿಸುವುದು ಬಿಟ್ಟರೆ ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ” ಎಂದು ಹೇಳಿದರು.
“ನಮಗೆ ಅನ್ಯಾಯ ಸರಿಪಡಿಸಲು ವಿಶೇಷ ಅನುದಾನದವಾಗಿ 11,495 ಕೋಟಿ ಕೊಡ್ತೀವಿ ಎಂದು ಘೋಷಿಸಿದರು. ಆದರೆ ಈ ಹಣ ಕೊಡಬೇಡಿ ಎಂದು ತಡೆ ಹಿಡಿದವರೇ ಆರ್ಥಿಕ ಸಚೆವೆ ನಿರ್ಮಲಾ ಸೀತಾರಾಮನ್ ಅವರು. ಆದರೆ ಈಗೇಕೆ ಸುಳ್ಳು ಹೇಳ್ತಿದ್ದೀರಿ ಮೇಡಂ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ಅವರೇ ಈ ಮಟ್ಟದ ದ್ರೋಹ ಮಾಡಿದ ಬಳಿಕವೂ ಸುಳ್ಳುಗಳನ್ನು ಹೇಳುತ್ತಿದ್ದಾರೆ” ಹರಿಹಾಯ್ದರು.
ಒಂದು ರೂಪಾಯಿ ಪರಿಹಾರ ಇಲ್ಲ
“ರಾಜ್ಯಕ್ಕೆ ಭೀಕರ ಬರಗಾಲ ಬಂತು. ಸೆಪ್ಟೆಂಬರ್ ನಿಂದ ನಿರಂತರವಾಗಿ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬರಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಇನ್ನೂ ಒಂದೂ ಸಭೆಯನ್ನೂ ನೆಪಕ್ಕೂ ಕರೆದಿಲ್ಲ. ಇದರಿಂದ ಒಂದು ರೂಪಾಯಿ ಕೂಡ ಬಂದಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ಬರದಿಂದ ರಾಜ್ಯದ ಜನತೆ ಕಂಗಾಲಾಗದಂತೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ. 31 ಲಕ್ಷ ರೈತರಿಗೆ 650 ಕೋಟಿ ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಇನ್ನೂ ಲಕ್ಷ ಲಕ್ಷ ರೈತರಿಗೆ ಪರಿಹಾರ ಕೊಡುವವರಿದ್ದೇವೆ” ಎಂದು ವಿವರಿಸಿದರು.
“ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟಲ್ಲಿ ಬಜೆಟ್ ನಲ್ಲೇ ಘೋಷಿಸಿದರು. ಇದರಲ್ಲೂ ಒಂದು ರೂಪಾಯಿ ಕೂಡ ಬಂದಿಲ್ಲ. ಅವರೇ ಘೋಷಿಸಿ ಅವರೇ ಕೈ ಎತ್ತಿಬಿಟ್ಟರು. ಒಂದೇ ಒಂದು ರೂಪಾಯಿ ಕೂಡ ಇವತ್ತಿನವರೆಗೂ ಕೊಡಲಿಲ್ಲ ಎಂದು ಬಜೆಟ್ ಪ್ರತಿ ತೋರಿಸಿ” ಎಂದು ಪ್ರಶ್ನಿಸಿದರು.
ಮಹದಾಯಿ ಯೋಜನೆಗೆ ಇವತ್ತಿನವರೆಗೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ
“ಕೃಷ್ಣಾ ಮೇಲ್ದಂಡೆ ಬಗ್ಗೆ ಇವತ್ತಿನವರೆಗೂ ಗೆಜೆಟ್ ನೋಟಿಫಿಕೇಷನ್ ಆಗಲಿಲ್ಲ. ಇದರಿಂದ ಕೆಲಸವೇ ಶುರು ಆಗಿಲ್ಲ. ಯಾಕಿಂಥಾ ಅನ್ಯಾಯ? ಈಗ ಮಾಜಿ ಪ್ರಧಾನಿ ದೇವೇಗೌಡರು ಮೋದಿಯವರನ್ನು ಹೊಗಳುತ್ತಾ ಕುಳಿತಿದ್ದಾರೆ. ಹಾಗಿದ್ರೆ ಮೇಕೆದಾಟು, ಕೃಷ್ಣ ಮೇಲ್ದಂಡೆಗೆ ಅನುಮತಿ ಕೊಡಿಸಲಿ. ರಾಜ್ಯಕ್ಕೆ ಬರಬೇಕಾದ ಹಣ ವಾಪಾಸ್ ಕೊಡಿಸಲಿ” ಎಂದು ಆಗ್ರಹಿಸಿದರು.
“ರಾಯಚೂರು ಏಮ್ಸ್ ಕೊಡ್ತೀವಿ ಎಂದರು. ನಾನು ಸಿಎಂ ಆಗಿ ಮೂರು ಪತ್ರ ಬರೆದೆ. ಆದರೆ, ಇವತ್ತಿನವರೆಗೂ ಏಮ್ಸ್ ಬರಲಿಲ್ಲ. ಪತ್ರಗಳಿಗೆ ಉತ್ತರ ವೂ ಬರಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಬರೆದ ಪತ್ರಕ್ಕೆ ಕೇಂದ್ರ ಉತ್ತರ ಕೊಡಲಿಲ್ಲ. ಇದು 7.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ” ಎಂದರು.