ರಾಜ್ಯದಲ್ಲಿ ರೋಗ ನಿರೋಧಕ, ಕೀಟ ನಿರೋಧಕ ಹಾಗೂ ಅಧಿಕ ಇಳುವರಿ ತಳಿಗಳನ್ನು ಅಭಿವೃದ್ಧಿಪಡಿಸಲು ಕೃಷಿ ವಿವಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಿವೆ. 2023-24ನೇ ಸಾಲಿನಲ್ಲಿ ಒಟ್ಟು 31 ತಳಿಗಳನ್ನು ಬಿಡುಗಡೆ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕೋಲಾರ ಶಾಸಕ ಕೊತ್ತನೂರು ಮಂಜುನಾಥ್ ಅವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಕೇಂದ್ರೀಯ ಬೀಜ ಸಮಿತಿ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಬೀಜ ಉಪಸಮಿತಿಯನ್ನು ರಚಿಸಲಾಗಿದೆ” ಎಂದರು.
“ಹವಾಮಾನ ವೈಪರೀತ್ಯಗಳಾದ ಉಷ್ಣಾಂಶ, ತೇವಾಂಶ ಹಾಗೂ ಮಳೆಯಲ್ಲಿ ಬದಲಾವಣೆ ಹಾಗೂ ರೈತರು ಅನುಸರಿಸುವ ಬೇಸಾಯ ಪದ್ಧತಿಗಳಿಂದ ಕೀಟ/ ರೋಗಗಳ ಬಾಧೆ ಹೆಚ್ಚಾಗಿ ಸಸ್ಯಸಂರಕ್ಷಣಾ ಔಷಧಿಗಳ ಸಿಂಪರಣೆ ಅನಿವರ್ಯವಾಗಿರುತ್ತದೆ” ಎಂದರು.
ಬೀಜಗಳ ಪೂರೈಕೆ
“ರಾಜ್ಯದ ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಮಿತಿಯೊಳಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲು ‘ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ ’ಯೋಜನೆಯಡಿ “ಬೀಜಗಳ ಪೂರೈಕೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ರಾಜ್ಯ ಸರ್ಕಾರದ ‘ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ’ ಯೋಜನೆಯಡಿ “ಬೀಜಗಳ ಪೂರೈಕೆ” ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ 6.12ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೂ.15,530.42 ಲಕ್ಷಗಳ ರಿಯಾಯಿತಿ ದರದಲ್ಲಿ 13.08 ಲಕ್ಷ ರೈತರಿಗೆ ವಿತರಿಸಲಾಗಿದೆ” ಎಂದರು.