ಮಂಗಳೂರು ಪ್ರವಾಸದ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಚ್ಚನಾಡಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಂದು ಭೇಟಿ ನೀಡಿ, ಘಟಕದಲ್ಲಿ ನಡೆಯುತ್ತಿರುವ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆ, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆ ಹಾಗೂ ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಪಚ್ಚನಾಡಿ ಘಟಕದಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 121 ಟನ್ ಹಸಿಕಸ ಹಾಗೂ 50 ಟನ್ ಒಣಕಸ ಸೇರಿದಂತೆ ಎಳನೀರು ಮತ್ತು ತೆಂಗಿನಕಾಯಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವುದರ ಜೊತೆಗೆ, ಮೂಲದಲ್ಲೇ ಶೇ.100ರಷ್ಟು ಕಸವನ್ನು ಕಡ್ಡಾಯವಾಗಿ ವಿಂಗಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ವಿಂಗಡಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಮತ್ತಷ್ಟು ಸುಧಾರಿಸಬೇಕು. ಸಾರ್ವಜನಿಕರಲ್ಲಿ ಮೂಲದಲ್ಲೇ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಿ, ನಗರವನ್ನು ಸ್ವಚ್ಛ ಹಾಗೂ ಸುಸ್ಥಿರವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯ ಕಮಾಂಡ್ ಸೆಂಟರ್‌ಗೆ ಭೇಟಿ
ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿ, ಅದರ ಕಾರ್ಯವೈಖರಿ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಪರಿಶೀಲಿಸಿದರು.
ನಗರದ ಸಂಚಾರ ನಿರ್ವಹಣೆ, ಸಾರ್ವಜನಿಕ ಭದ್ರತೆ ಸೇರಿದಂತೆ ವಿವಿಧ ನಗರ ಸೇವೆಗಳನ್ನು ತಂತ್ರಜ್ಞಾನದ ನೆರವಿನಿಂದ ಒಂದೇ ಸೂರಿನಡಿ ಮೇಲ್ವಿಚಾರಣೆ ಮಾಡುವ ಕಮಾಂಡ್ ಸೆಂಟರ್‌ನ ಕಾರ್ಯವಿಧಾನದ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಮಾಂಡ್ ಸೆಂಟರ್‌ನಲ್ಲಿ ಅಳವಡಿಸಲಾಗಿರುವ ತಾಂತ್ರಿಕ ವ್ಯವಸ್ಥೆಗಳು, ನಗರದ ವಿವಿಧ ಭಾಗಗಳ ಮೇಲ್ವಿಚಾರಣೆ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಸಮನ್ವಯದ ಕುರಿತು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ನಗರದ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಕಮಾಂಡ್ ಸೆಂಟರ್‌ನ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಾಗರಿಕರಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಚಿವರು ಮಾರ್ಗದರ್ಶನ ನೀಡಿದರು.
ನಗರದ ಪ್ರಮುಖ ಪ್ರದೇಶಗಳ ಮೇಲ್ವಿಚಾರಣೆ, ಸಾರ್ವಜನಿಕ ಸುರಕ್ಷತೆ ಹಾಗೂ ನಗರ ಸೇವೆಗಳ ನಿರ್ವಹಣೆಯಲ್ಲಿ ಕಮಾಂಡ್ ಸೆಂಟರ್‌ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ, ಶ್ರೀ ಮೋಹನ್ ಪಿ.ವಿ., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಜೈವಿಕ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ ಬಲ್ಲಾಳ್ ಜೈನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


