ಹೊಸಪೇಟೆ ತಾಲ್ಲೂಕು ಕಾರಿಗನೂರು ಬಳಿ ಶುಕ್ರವಾರ ಆಟೊಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆಟೊ ಸೇತುವೆ ಕೆಳಗೆ ಬಿದ್ದು ಏಳು ಮಂದಿ ಮೃತಪಟ್ಟಿರುವ ಘಟನೆ ನನಗೆ ತೀವ್ರ ಆಘಾತ ಮೂಡಿಸಿದೆ.
ಮೃತರ ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಈ ಕುರಿತು ಹೆಚ್ಚಿನ ಮಾಹಿತಿ ಪಡೆದಿರುವೆ. ಮೃತರ ಕುಟುಂಬದ ಜತೆ ಸರ್ಕಾರ ಇದ್ದು ಪರಿಹಾರ ಸೇರಿದಂತೆ ಇತರೆ ನೆರವು ಬಗ್ಗೆ ಜಿಲ್ಲಾ ಆಡಳಿತದ ಜತೆ ಚರ್ಚಿಸಲಾಗುವುದು.
-ಜಮೀರ್ ಅಹಮದ್ ಖಾನ್,
ಜಿಲ್ಲಾ ಉಸ್ತುವಾರಿ ಸಚಿವರು.
ವಿಜಯನಗರ : ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶನಿವಾರ ತಮ್ಮ ಮೊದಲ ಜಿಲ್ಲಾ ಭೇಟಿ ಸಂದರ್ಭದಲ್ಲಿ
ಹೊಸಪೇಟೆ ತಾಲ್ಲೂಕಿನಕಾರಿಗನೂರು ಬಳಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಹೊಸಪೇಟೆ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿಯವರು ತಲಾ ಎರಡು ಲಕ್ಷ, ಜಿಲ್ಲಾ ಉಸ್ತುವಾರಿ ಸಚಿವರು ಎರಡು ಲಕ್ಷ ಘೋಷಿಸಿದ್ದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅವಕಾಶ ಇದ್ದರೆ ಪರಿಶೀಲಿಸಿ ಒಂದು ಲಕ್ಷ ಸೇರಿಸಿ ಒಟ್ಟು ಐದು ಲಕ್ಷ ರೂ. ಪ್ರತಿ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಇದೇ ವೇಳೆ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದರು.
ಎರಡು ಆಸ್ಪತ್ರೆಗಳಿಗಳಿಗೆ ಭೇಟಿ ನೀಡಿದ ನಂತರ ಸಚಿವರು ಬಳ್ಳಾರಿ ನಗರದ ವಿಮ್ಸ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಇದಕ್ಕೂ ಮುನ್ನ ಸಚಿವರು ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಪಘಾತ ಪ್ರಕರಣಗಳು ಈ ಭಾಗದಲ್ಲಿ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.