Homeಕರ್ನಾಟಕಕರ್ತವ್ಯದಿಂದ ಜಾರಿಕೊಂಡು ಕೇಂದ್ರದ ಮೇಲೆ ಗೂಬೆ ಕೂರಿಸುತ್ತೀರಲ್ಲ: ಸಿಎಂ ವಿರುದ್ಧ ಅಶೋಕ್‌ ವಾಗ್ದಾಳಿ

ಕರ್ತವ್ಯದಿಂದ ಜಾರಿಕೊಂಡು ಕೇಂದ್ರದ ಮೇಲೆ ಗೂಬೆ ಕೂರಿಸುತ್ತೀರಲ್ಲ: ಸಿಎಂ ವಿರುದ್ಧ ಅಶೋಕ್‌ ವಾಗ್ದಾಳಿ

“ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಸಿಎಂ ಕುರ್ಚಿಯಲ್ಲಿ ಕೂತಿದ್ದೇನೆ ಎಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ” ಎಂದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ತಿರುಗೇಟು ನೀಡಿದ್ದಾರೆ.

‘ಕರ್ನಾಟಕದ ಯುವಕರಿಗೆ ಮೋಸ, ಮಲಯಾಳಿ ಯುವಕರಿಗೆ ಕೆಲಸ’ ಎಂದು ಎಕ್ಸ್‌ ತಾಣದಲ್ಲಿ ಟೀಕಿಸಿದ್ದ ಆರ್ ಅಶೋಕ್‌ಗೆ ಸಿದ್ದರಾಮಯ್ಯ ಕಟುವಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಪ್ರತಿಯಾಗಿ ಅಶೋಕ್‌ ಮತ್ತೆ ಟ್ವೀಟ್‌ ಮಾಡಿ ಉತ್ತರಿಸಿದ್ದಾರೆ.

“ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ, ಅದು ನನಗೆ ಬೇಡವೂ ಬೇಡ. ಆದರೆ ಜೂನ್ 4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೆ, ಜೂನ್ 4 ರ ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನ ಕುರ್ಚಿಯಿಂದ ಕೆಳಗಿಳಿಸುತ್ತಾರೆ ನೋಡೋಣ” ಎಂದಿದ್ದಾರೆ.

“ತಾವು ಅಪರೂಪಕ್ಕೆ ತಮ್ಮ ಗಾಢ ನಿದ್ದೆಯಿಂದ ಎದ್ದು ನನ್ನ ಒಂದು ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಮೊದಲು ಅದಕ್ಕೆ ಅಭಿನಂದನೆಗಳು. ಆದರೆ ಅದರಲ್ಲೂ ಮೈಯೆಲ್ಲಾ ಎಣ್ಣೆ ಸವರಿಕೊಂಡಿರುವಂತೆ ತಮ್ಮ ಕರ್ತವ್ಯದಿಂದ ಜಾರಿಕೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತೀರಲ್ಲ ತಮ್ಮ ಭಂಡತನಕ್ಕೆ ಏನು ಹೇಳಬೇಕು” ಎಂದು ಪ್ರಶ್ನಿಸಿದ್ದಾರೆ.

“ಪತ್ರಿಕೆಗಳಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಪುಟಗಟ್ಟಲೆ ಜಾಹೀರಾತು ಕೊಡುವಾಗ ಅದು ನಿಮ್ಮ ಯೋಜನೆ. ಹಸಿರು ಬಾವುಟ ತೋರಿಸಿ ಬಸ್ಸಿಗೆ ಚಾಲನೆ ನೀಡುವಾಗ ಅದು ತಮ್ಮ ಸರ್ಕಾರದ ಕೊಡುಗೆ. ಆದರೆ ಅದರಲ್ಲಿ ನ್ಯೂನತೆಗಳು ಕಂಡು ಬದರೆ ಅದು ಕೇಂದ್ರ ಸರ್ಕಾರದ ಹೊಣೆ. ಇದು ಯಾವ ಸೀಮೆ ಆಡಳಿತ ಸ್ವಾಮಿ? ತಮಗೆ ಕರ್ನಾಟಕದ ಜನತೆ ಅಧಿಕಾರ ಕೊಟ್ಟಿರುವುದು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳಲಿ ಅಂತ ಅಲ್ಲ” ಎಂದು ಕುಟುಕಿದ್ದಾರೆ.

“ನಿಮಗೆ ನಿಜವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತಲ್ಲ? ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ತಾವು, ಎಲ್ಲದಕ್ಕೂ ಕೇಂದ್ರ ಮಂತ್ರಿಗಳಿಗೆ ಮನವಿ ಪತ್ರ ಕೊಡುವ ತಾವು ಇದಕ್ಕೆ ಮಾತ್ರ ಯಾಕೆ ಮಾಡಲಿಲ್ಲ. ಅಸಲಿಗೆ ನಾನು ಈ ವಿಷಯ ಪ್ರಸ್ತಾಪ ಮಾಡುವವರೆಗೂ ನಿಮಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ನಿಮ್ಮ ಆಡಳಿತ ವೈಖರಿ” ಎಂದು ಟೀಕಿಸಿದ್ದಾರೆ.

“ನಾಲ್ಕು ಅಹಂಕಾರದ ಮಾತುಗಳು ಆಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ತಿಳಿದಿದ್ದರೆ ಅದು ತಮ್ಮ ಭ್ರಮೆ. ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ, ಆಲ್ ದಿ ಬೆಸ್ಟ್!” ಎಂದು ಸಿದ್ದರಾಮಯ್ಯಗೆ ಅಶೋಕ್‌ ಲೇವಡಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments