ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ನಮ್ಮ ಪಕ್ಷದ ನಾಯಕ ಸಿ ಪಿ ಯೋಗೇಶ್ವರ್ ಅವರಿಗೆ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು, ಅಶ್ವತ್ಥನಾರಾಯಣ ಸೇರಿ ಸಿ ಪಿ ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೆ ಹೆಚ್ ಡಿ.ಕುಮಾರಸ್ವಾಮಿ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಸಿ ಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳುತ್ತೇವೆ” ಎಂದರು.
ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗುವ ವಿಚಾರವಾಗಿ ಮಾತನಾಡಿ, “ಜೆಡಿಎಸ್ ನಾಯಕರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಪ್ರಾಥಮಿಕ ಹಂತದಲ್ಲಿದೆ. ಗುರುವಾರ ಕೋರ್ಟ್ನಲ್ಲಿ ಕೇಸ್ ಕೂಡ ಬರಲಿದೆ. ಮುಂದೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.
ಶಾಸಕರ ಖರೀದಿಗೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ವಿಚಾರವಾಗಿ ಮಾತನಾಡಿ, “ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಸಿಲುಕಿದೆ. ಹೀಗಾಗಿ ಜನರ ಮನಸ್ಸಿನ ವಿಷಯ ಡೈವರ್ಟ್ ಮಾಡುತ್ತಿದ್ದಾರೆ ಅಷ್ಟೇ. ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಸರ್ಕಾರ ಇರುತ್ತದೋ, ಬೀಳುತ್ತದೋ ಎಂಬ ಆತಂಕದಲ್ಲಿದ್ದಾರೆ. ನಾವ್ಯಾರು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಿಲ್ಲ. ಯಾವ ಲೀಡರ್ ನಿಮ್ಮ ಬಳಿ ಬಂದು ಮಾತಾಡಿದ್ದಾರೆ ಹೆಸರು ಹೇಳಿ” ಎಂದು ಪ್ರಶ್ನಿಸಿದರು.
ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಪ್ರತಿಕ್ರಿಯಿಸಿ, “ಫೋಟೋ ತೆಗೆಯಲು ಮೊಬೈಲ್ ಎಲ್ಲಿಂದ ಬಂತು. ಇದೆಲ್ಲ ನುಣುಚಿಕೊಳ್ಳುವ ವಿಚಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ, ಕೆಲವು ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತದೆ, ಯಾವ ಖಾತೆ ಹೋಗುತ್ತದೆ ಅಂತ ಭೀತಿಯಲ್ಲಿದ್ದಾರೆ. ಜೈಲಿನಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.