ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಕೇಳಿದ್ದೆ. ‘ನನಗೆ ವಿಷ ಕುಡಿಯಲೂ ಹಣವಿಲ್ಲ, ನಿನಗೆ ಎಲ್ಲಿಂದ ಅನುದಾನ ಕೊಡಲಿ’ ಎಂದಿದ್ದರು ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, “ ಅಥಣಿ ಪೂರ್ವಭಾಗದ ಜನರು ಬರಗಾಲದಿಂದ ಬಳಲುತ್ತಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ನೀರಾವರಿ ಯೋಜನೆಗೆ ಚಾಲನೆ ನೀಡಿ, ನೀರಿನ ಬರ ನೀಗಿಸಿದ್ದಾರೆ. ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ. ಹಲವಾರು ಯೋಜನೆಗಳಿಗೆ ಕೋಟ್ಯಂತರ ಅನುದಾನ ನೀಡಿದ್ದಾರೆ” ಎಂದರು.
“ಯಡಿಯೂರಪ್ಪ ಮತ್ತು ಈಶ್ವರಪ್ಪ ರಾಜ್ಯದಲ್ಲಿ ಬಿಜೆಪಿ ಬಲಪಡಿಸಿದ್ದಾರೆ. ಆದರೆ, ಈಶ್ವರಪ್ಪ ಮಗನಿಗೆ ಟಿಕೆಟ್ ನೀಡಲಿಲ್ಲ. ಜಗದೀಶ್ ಶೆಟ್ಟರ್‌ಗೆ ಮೊದಲು ಬಾಲ ಕಟ್ ಮಾಡಿದರು. ಈಗೀಗ ಜಗದೀಶ್ ಶೆಟ್ಟರ್ ಬಾಲ ಮತ್ತೆ ಚಿಗುರುತ್ತಿದೆ” ಎಂದು ಲೇವಡಿ ಮಾಡಿದರು.
“ಎರಡು ದಿನಗಳ ಹಿಂದೆ ಸಚಿವರು ಪೂರ್ವಭಾವಿ ಸಭೆ ಮಾಡೋಣ, ಶಿವಯೋಗಿ ನಾಡು ಅಥಣಿಯಿಂದ ಪ್ರಚಾರ ಆರಂಭಿಸೋಣ ಎಂದು ಹೇಳಿದ್ದರು. ಯಾವುದೇ ಪಕ್ಷ ಮೊದಲ ಸಭೆ ಅಥಣಿಯಿಂದ ಆರಂಭಿಸಿದರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತದೆ ಎನ್ನುವುದು ನಂಬಿಕೆ” ಎಂದರು.
“ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಚುನಾವಣೆಯ ತಂತ್ರ ಪ್ರತಿತಂತ್ರಗಳನ್ನು ರೂಪಿಸಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸಗಳನ್ನ ಜನರಿಗೆ ತಲುಪಿಸಬೇಕು” ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, “ದೇಶಕ್ಕೆ ಕಾಂಗ್ರೆಸ್ ಹಲವು ಕೊಡುಗೆ ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು” ಎಂದು ಪುತ್ರಿ ಪ್ರಿಯಾಂಕಾ ಪರ ಮನವಿ ಮಾಡಿದರು.