ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಯಲ್ಲಿಲ್ಲ. ನಮ್ಮ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದು, ಕಾಂಗ್ರೆಸ್ನವರ ಸಂಪರ್ಕದಲ್ಲಿದ್ದಾರೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಸೋಮಶೇಖರ್ ಮತ ಹಾಕಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದರು.
ಮಂಡ್ಯ, ಮೈಸೂರು ಗೆಲ್ಲುತ್ತೇವೆ
“ಸಂಸದೆ ಸುಮಲತಾ ಪ್ರಭಾವ ಬಳಸಿಕೊಂಡು ಮಂಡ್ಯ, ಮೈಸೂರು ಗೆಲ್ಲುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಬೆಂಬಲ ನೀಡಿದ್ದೆವು. ಈ ಬಾರಿ ಚುನಾವಣಾ ಪ್ರಚಾರಕ್ಕೆ ಸಂಸದೆ ಸುಮಲತಾರನ್ನು ಬಳಸಿಕೊಳ್ಳುತ್ತೇವೆ. ಈಗಾಗಲೇ ಕೇಂದ್ರ ನಾಯಕರ ಜೊತೆ ಸುಮಲತಾ ಮಾತನಾಡಿದ್ದಾರೆ” ಎಂದು ತಿಳಿಸಿದರು.
“ಸಂಸದೆ ಸುಮಲತಾ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಕೊಪ್ಪಳ ಮಾಜಿ ಸಂಸದ ಶಿವರಾಮಗೌಡ ಕೂಡ ಬಿಜೆಪಿ ಸೇರಿದ್ದಾರೆ. ಮೊನ್ನೆ ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಶಾ ಬಂದಾಗ ಮೈತ್ರಿ ಬಗ್ಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ತಳಮಟ್ಟದಿಂದಲೇ ಹೊಂದಾಣಿಕೆ ಆಗಬೇಕು ಎಂದಿದ್ದಾರೆ” ಎಂದರು.
“ಬೀದರ್ನಲ್ಲಿ ಅಸಮಾಧಾನ ಶಮನವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದೇವೆ. ರಾಜ್ಯದ ಎಲ್ಲಾ ಕಡೆ ಸಮನ್ವಯ ಸಮಿತಿ ಸಭೆ ಮಾಡುತ್ತಿದ್ದೇವೆ. ಜೆಡಿಎಸ್ ಹಾಗೂ ಬಿಜೆಪಿ ಹಾಲು ಜೇನಿನಂತೆ ಒಗ್ಗೂಡುತ್ತಿದ್ದೇವೆ” ಎಂದು ಹೇಳಿದರು.