“ಮಾತನಾಡಲು ನನಗೆ ಪದಗಳೇ ಇಲ್ಲ. ನಮ್ಮ ಆಟಗಾರ್ತಿಯರು ಈಗಾಗಲೇ ಫೈನಲ್ ಪಂದ್ಯದತ್ತ ಗಮನಹರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ…”
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಭಾವುಕ ನುಡಿಯಿದು. ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ 2025ರ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯದ ಬಳಿಕ ಮಾತನಾಡಿದ ಅವರು ಹೀಗೆ ಮಾತನಾಡಿದರು.
ಚೇಸಿಂಗ್‌ನಲ್ಲಿ ಅಮೋಘ ಶತಕ ಸಿಡಿಸಿದ ಜೆಮಿಮಾ ರಾಡ್ರಿಗಸ್ ಕುರಿತು ಮಾತನಾಡಿದ ಕೌರ್, “ಜೆಮಿ ಯಾವಾಗಲೂ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಬಯಸುತ್ತಾರೆ. ಅವರು ತಂಡದ ಸ್ಥಿತಿ ಅರಿತು ಜವಾಬ್ದಾರಿ ತೆಗೆದುಕೊಂಡು ಆಡುತ್ತಾರೆ. ನಮಗೆ ಅವರ ಮೇಲೆ ಆ ನಂಬಿಕೆ ಇತ್ತು” ಎಂದು ತಿಳಿಸಿದರು.
ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್ ಅಂತರದಿಂದ ಸೋಲಿಸಿದ ಭಾರತ, ಫೈನಲ್ ಗೆ ಲಗ್ಗೆ ಇಟ್ಟಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಿ ಆಲೌಟ್ ಆಗಿತ್ತು. ಭಾರತ ಪರ ಬೌಲರ್ ಗಳಾದ ದೀಪ್ತಿ ಶರ್ಮಾ, ಶ್ರೀ ಚಾರಣಿ ತಲಾ 2 ವಿಕೆಟ್ ಪಡೆದರೆ, ಅಮಾನ್ ಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್ ತಲಾ ಒಂದೊಂದು ವಿಕೆಟ್ ಪಡೆದರು.

ಆಸೀಸ್ ನೀಡಿದ ಬೃಹತ್ ರನ್ ಗಳ ಬೆನ್ನತ್ತಿದ್ದ ಭಾರತ ತಂಡ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ 10, ಸ್ಮೃತಿ ಮಂಧಾನ ಕೇವಲ 24 ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಬಳಿಕ ಜೆಮಿಯಾ ರೋಡ್ರಿಗಸ್ ಅವರ ಆಕರ್ಷಕ ಶತಕ (127) ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅರ್ಧ ಶತಕ (89) ರನ್ ದೀಪ್ತಿ ಶರ್ಮಾ 24, ರಿಚಾ ಘೋಷ್ 26 ಹಾಗೂ ಅಮಾನ್ ಜೋತ್ ಕೌರ್ ಅವರ 15 ರನ್ ಗಳ ನೆರವಿನಿಂದ 48.3 ಓವರ್ ಗಳಲ್ಲಿ ಇನ್ನೂ 9 ಎಸೆತ ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿತು. ಜೆಮಿಯಾ ರೋಡ್ರಿಗಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿರುವ ಭಾರತ ತಂಡ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾನುವಾರ ಸೆಣಸಾಟ ನಡೆಸಲಿದೆ.


