ಲೋಕಸಭೆ ಚುನಾವಣೆಯ ಕುರಿತಂತೆ ತಮ್ಮ ನಿರ್ಧಾರವನ್ನು ಬುಧವಾರ ಪ್ರಕಟಿಸುವುದಾಗಿ ಘೋಷಿಸಿದ್ದ ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಅವರು ಚುನಾವಣಾ ಕಣದಿಂದ ದೂರ ಉಳಿದು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಮಂಡ್ಯದ ಕಾಳಿಕಾಂಬ ದೇಗುಲದ ಬಳಿ ಬುಧವಾರ ಸುಮಲತಾ ಅಂಬರೀಷ್ ಅವರು ಬೆಂಬಲಿಗರ ಸಭೆ ಕರೆದು ತಮ್ಮ ನಿರ್ಧಾರ ಪ್ರಕಟಿಸಿದರು.
“ನಾನು ಈ ಒಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮಂಡ್ಯಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ. ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ನರೇಂದ್ರ ಮೋದಿ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯ ಕ್ಷೇತ್ರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರ ಗೌರವ ನಾನು ಉಳಿಸಿಕೊಳ್ಳುವೆ” ಎಂದರು.
“ಮಳವಳ್ಳಿಯ ಸೊಸೆ ಮಳವಳ್ಳಿಯ ಋಣ ತೀರಿಸಿದ್ದಾಳೆ. ನನ್ನ ಹಿಂದೆ ಸಾಕಷ್ಟು ಜನ ಬೆಂಬಲವಾಗಿ ನಿಂತಿದ್ದರು. ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ. ನನ್ನ ಮಕ್ಕಳಂತಿರುವ ದರ್ಶನ್ ಮತ್ತು ಯಶ್ ಅವರಿಗೂ ಧನ್ಯವಾದ ತಿಳಿಸದೇ ಇದ್ದರೆ ತಪ್ಪಾಗುತ್ತದೆ” ಎಂದು ಹೇಳಿದರು.
“ಈಗಲೂ ಸಾಕಷ್ಟು ಸವಾಲುಗಳು ನನ್ನ ಮುಂದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯೇ ನನಗೆ ಬೆಂಬಲಿಸಿ ಭಾಷಣ ಮಾಡಿದ್ದರು. ಹಾಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದೆ. ಇವತ್ತು ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿಯಾಗಿದೆ. ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಲಿ ಎಂದು ಸಾಕಷ್ಟು ಪ್ರಯತ್ನಪಟ್ಟೆ. ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಲು ಸಾಕಷ್ಟು ನಾಯಕರು ಸಲಹೆ ನೀಡಿದರು. ನಾನು ಮಂಡ್ಯ ಬಿಟ್ಟು ಹೋಗಲ್ಲ. ಗೆದ್ದರೂ, ಸೋತರೂ ಇಲ್ಲೇ ಇರುವೆ” ಎಂದರು.
“ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ಆಸೆ ನನಗಿಲ್ಲ. ನನ್ನ ಆಪ್ತ ವಲಯದಲ್ಲಿರುವವರು ಬೆಂಗಳೂರಿಗೆ ಬಂದು ಪಕ್ಷೇತರವಾಗಿ ಸ್ಪರ್ಧಿಸಿ ಎಂದು ಕೆಲವರು ಕೇಳಿದರು. ಇನ್ನೂ ಕೆಲವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಂದು ಹೇಳಿದರು. ತುಂಬಾ ಅಳೆ ದುತೂಗಿ ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದಿರುವೆ. ಎಂಪಿ ಚುನಾವಣೆ ಎಂಬುದು ಹುಡುಗಾಟ ಅಲ್ಲ. ನನಗೆ ಸ್ವಾರ್ಥವಿಲ್ಲ. ಯಾವ ಕಾರಣಕ್ಕೆ ನಾನು ಪಕ್ಷೇತರವಾಗಿ ನಿಲ್ಲಬೇಕು? ಹಠಮಾಡಿ ನಿಂತರೆ ಅದು ಸ್ವಾರ್ಥ ರಾಜಕಾರಣ ಆಗುತ್ತದೆ” ಎಂದು ತಿಳಿಸಿದರು.
“ಸುಮಲತಾ ಅವರ ಅವಶ್ಯಕತೆ ಇಂದೆಯೂ ಇಲ್ಲ, ಮುಂದೆಯೂ ಇರಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಸ್ವಾಭಿಮಾನಬಿಟ್ಟು ನಾನು ನಡೆಯೋಲ್ಲ. ಅಲ್ಲಿಗೆ ನಾನ್ಯಾಕೆ ಹೆಜ್ಜೆ ಇಡಲಿ. ನನ್ನ ಭವಿಷ್ಯದ ಬಗ್ಗೆ ನನಗೆ ಚಿಂತೆಯಿಲ್ಲ. ನಾನು ಈ ಮಣ್ಣಿನ ಸೊಸೆ. ಇದೇ ಶಾಶ್ವತ” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.