ಡಿ ಲಿಮಿಟೇಷನ್ ಮಾಡಲು ಹೊರಟಿರುವ ಕೇಂದ್ರದ ದಮನಕಾರಿ ನೀತಿ ವಿರೋಧಿಸಿ ದಕ್ಷಿಣದ ರಾಜ್ಯಗಳೆಲ್ಲಾ ಒಟ್ಟಾಗಿ ಹೋರಾಡುತ್ತಿವೆ. ಡಿ ಲಿಮಿಟೇಷನ್ ಆದರೆ ಸಂಸತ್ತಿನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವೇ ಕುಸಿಯಲಿದೆ. ಇದು ಆಘಾತಕಾರಿ ಬೆಳವಣಿಗೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
“ದಕ್ಷಿಣದ ಎಲ್ಲಾ ರಾಜ್ಯಗಳು ವಿರೋಧಿಸಲೇಬೇಕಿದೆ. ಆದರೆ ಡಿ ಲಿಮಿಟೇಷನ್ ವಿರುದ್ಧದ ಹೋರಾಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಕಣ್ಣಿಗೆ ರಾಷ್ಟ್ರದ್ರೋಹದಂತೆ ಕಂಡಿದೆ. ಮೋದಿ ಸರ್ಕಾರವನ್ನು ಮೆಚ್ಚಿಸಲು ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಲಜ್ಜೆಗೆಟ್ಟವರಂತೆ ವರ್ತಿಸುತ್ತಿರುವ BJP ನಾಯಕರಿಗೆ ಕೇಂದ್ರ ಎಸಗುತ್ತಿರುವ ಅನ್ಯಾಯ ಅರ್ಥವಾಗುವುದು ಯಾವಾಗ” ಎಂದು ಎಕ್ಸ್ ತಾಣದಲ್ಲಿ ಪ್ರಶ್ನಿಸಿದ್ದಾರೆ.
“ರಾಜ್ಯಗಳಿಗೆ ಮಾರಕವಾಗುವ NEP ಜಾರಿಗೆ ತಂದಾಗ, ತ್ರಿ ಭಾಷಾ ಸೂತ್ರ ತಂದಾಗ, ಡಿಲಿಮಿಟೇಷನ್ ಮಾಡಲು ಹೊರಟಾಗ ಬಿಜೆಪಿಯವರ ನಾಲಗೆ ಹೊರಳಾಡುವುದೇ ಇಲ್ಲ. ರಾಜ್ಯಕ್ಕೆ ಏನೇ ದ್ರೋಹವಾದರೂ ಸರಿ ಮೋದಿ ಸರ್ಕಾರದ ವಿರುದ್ಧ ಬಾಯಿ ಬಿಡಬಾರದು ಎಂಬ ಅಲಿಖಿತ ನಿಯಮವೊಂದನ್ನು ರಾಜ್ಯ ಬಿಜೆಪಿ ನಾಯಕರು ಪಾಲಿಸುತ್ತಿದ್ದಾರೆ. ಇದಕ್ಕಿಂತ ಗುಲಾಮಿತನ ಇನ್ನೇನಿದೆ?” ಎಂದು ಕುಟುಕಿದ್ದಾರೆ.
“ನೆಲ,ಜಲ,ಭಾಷೆ ಮತ್ತು ಅಸ್ಮಿತೆಯ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಾಗಿರಬೇಕು. ಆದರೆ ನಾಡಿನ ಹಿತಾಸಕ್ತಿಯ ವಿಷಯದಲ್ಲಿ ಕೇಂದ್ರ ಆಟವಾಡುತ್ತಿರುವಾಗ ಬಿಜೆಪಿಯ ಒಬ್ಬನೇ ಒಬ್ಬ ನಾಯಕ ಕಡ್ಡಿ ತುಂಡಾದಂತೆ ವಿರೋಧ ಮಾಡಿದ್ದಾರೆಯೇ.? ತಮ್ಮ ದೆಹಲಿ ಪ್ರಭುಗಳನ್ನು ಮೆಚ್ಚಿಸಲು ನಾಡಿನ ಹಿತಾಸಕ್ತಿಯನ್ನು ಬಲಿ ಕೊಡುತ್ತಿರುವ ಬಿಜೆಪಿಯವರನ್ನು ಯಾಕೆ ನಾಡದ್ರೋಹಿಗಳೆಂದು ಕರೆಯಬಾರದು” ಎಂದು ಪ್ರಶ್ನೆ ಮಾಡಿದ್ದಾರೆ.