Homeಕರ್ನಾಟಕಸಣ್ಣಪುಟ್ಟ ವಿಷಯಕ್ಕೂ ಕೇಸ್ ಹಾಕುವ ಸರ್ಕಾರ ಜಮೀರ್ ವಿಷಯದಲ್ಲಿ ಯಾಕೆ ಮೌನ: ಕುಮಾರಸ್ವಾಮಿ ಪ್ರಶ್ನೆ

ಸಣ್ಣಪುಟ್ಟ ವಿಷಯಕ್ಕೂ ಕೇಸ್ ಹಾಕುವ ಸರ್ಕಾರ ಜಮೀರ್ ವಿಷಯದಲ್ಲಿ ಯಾಕೆ ಮೌನ: ಕುಮಾರಸ್ವಾಮಿ ಪ್ರಶ್ನೆ

ತಮ್ಮ ಬಗ್ಗೆ ಸಚಿವ ಜಮೀರ್ ಅಹಮದ್ ವರ್ಣಭೇದ ಹಾಗೂ ಜನಾಂಗೀಯ ನಿಂದನೆ ಮಾಡಿರುವ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಸಣ್ಣ ಸಣ್ಣ ವಿಷಯಕ್ಕೂ ಕೇಸು ಹಾಕಿ ಜೈಲಿಗೆ ಹಾಕುವ ಸಿದ್ದರಾಮಯ್ಯ ಸರ್ಕಾರ ಅವರು ಹೀಗೇಕೆ ಸುಮ್ಮನಿದೆ ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿ, “ಪ್ರತಿ ವಿಷಯಕ್ಕೂ ಪ್ರತಿಪಕ್ಷ ನಾಯಕರ ಕಾರ್ಯಕರ್ತರ ವಿರುದ್ಧ ವಿನಾಕಾರಣ ಕೇಸುಗಳನ್ನು ಹಾಕಲಾಗುತ್ತಿದೆ. ರಾಜ್ಯಪಾಲರ ಕಚೇರಿಯನ್ನೇ ಶೋಧ ಮಾಡುತ್ತೇನೆ ಎಂದು ಹೊರಟಿದ್ದ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಅದರ ಬಗ್ಗೆ ಹೇಳಿಕೆ ನೀಡಿದ ನಿಖಿಲ್ ಕುಮಾರಸ್ವಾಮಿ ಮೇಲೆ ಹಾಗೂ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧವೂ ಎಫ್ಐಆರ್ ಹಾಕಲಾಗಿದೆ. ನಮ್ಮ ಕಾರ್ಯಕರ್ತರು ಜಾಲತಾಣಗಳಲ್ಲಿ ಯಾರೋ ಹೇಳಿದ್ದನ್ನು ಫಾರ್ವರ್ಡ್ ಮಾಡಿದರು ಎಂದು ಕೇಸ್ ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.

“ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಸಚಿವರೊಬ್ಬರು ನನ್ನ ಬಗ್ಗೆ ಅತ್ಯಂತ ಕೀಳಾಗಿ ವರ್ಣಭೇದ ಮಾಡಿ, ಜನಾಂಗೀಯ ನಿಂದನೆ ಮಾಡಿ, ದೇವೆಗೌಡರ ಖಾನ್ ದಾನ್ ಖರೀದಿ ಮಾಡುತ್ತೇನೆ ಎಂದರೆ ಸರಕಾರ ಸುಮ್ಮನಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಒಂದು ಕಾನೂನು, ಜೆಡಿಎಸ್ ನವರಿಗೆ ಇನ್ನೊಂದು ಕಾನೂನು ಜಾರಿಯಲ್ಲಿ ಇದೆಯೇ” ಎಂದು ಪ್ರಶ್ನಿಸಿದರು.

“ಅಷ್ಟೇ ಅಲ್ಲ; ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೆಟ್ಟ ಹೇಳಿಕೆ ಕೊಟ್ಟ ಸಚಿವರ ಮಾತುಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ನಾಚಿಕೆಗೇಡು. ಇದನ್ನು ನಾಗರಿಕ ಸರ್ಕಾರ ಎಂದು ಕರೆಯಲು ಸಾಧ್ಯವೇ? ಇಂಥ ಹೇಳಿಕೆಗಳನ್ನು ಕೊಟ್ಟ ಎಷ್ಟು ಜನರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿಲ್ಲ.. ಸರ್ಕಾರ ಯಾಕೆ ಸುಮ್ಮನೆ ಇದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಥ ಸಂಸ್ಕೃತಿಯಿಂದ ನಾನು ಬಂದಿಲ್ಲ

“ಕರಿಯ, ಕುಳ್ಳ ಎಂದು ಇನ್ನೊಬ್ಬರಿಂದ ಮಾತನಾಡಿಸಿಕೊಳ್ಳುವ ಸಂಸ್ಕೃತಿಯಿಂದ ನಾನು ಬಂದಿಲ್ಲ. ಆ ವ್ಯಕ್ತಿಯನ್ನು ನಾನೆಂದೂ ಕುಳ್ಳ ಎಂದು ಕರೆದಿಲ್ಲ. ಹಣದ ಮದದಿಂದ ಖರೀದಿ ಮಾಡುವ ಹೇಳಿಕೆ ನೀಡಿದ್ದಾರೆ. ಆತನ ಜತೆ ಸ್ನೇಹ ಇದ್ದದ್ದು ಕೇವಲ ರಾಜಕೀಯವಾಗಿ ಅಷ್ಟೆ” ಎಂದರು.

“ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ, ಕೇಳಿ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಿಂದೊಮ್ಮೆ ನನ್ನನ್ನು ಕೇವಲ ‘ಕುಮಾರ’ ಎಂದು ಕರೆದಿದ್ದಕ್ಕೆ ಅವರನ್ನು ಹೊಡೆಯಲು ಹೋದ ಗಿರಾಕಿ ಇವರು. ಹೊರಟ್ಟಿ ಅವರು ಈಗಲೂ ಇದ್ದಾರೆ, ಅವರನ್ನೇ ಕೇಳಿ ಬೇಕಾದರೆ. ಅವತ್ತು ಅವರನ್ನು ಹೊಡೆಯಲು ಇವರು ಹೋಗಿರಲಿಲ್ಲವೇ?” ಎಂದು ವಿಚಾರಿಸಿ ಎಂದು ಹೇಳಿದರು.

“ಸಿಎಂಗೆ ದೇವೇಗೌಡರು ಗರ್ವಭಂಗ ಮಾಡ್ತೀನಿ, ಸೊಕ್ಕು ಮುರಿತೀನಿ ಅನ್ನೋದು ಮಾನನಷ್ಟ ಹೇಳಿಕೆನಾ? ನಾನು ಯಾವತ್ತೂ ಅವರನ್ನು ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ. ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ” ಎಂದು ಟಾಂಗ್ ಕೊಟ್ಟರು.

ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಆಫರ್!

ತಮ್ಮ ಸರಕಾರ ಬೀಳಿಸಲು ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಆಫರ್ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಮಾತನಾಡಿ, “ಸಿಎಂ ಹೇಳಿಕೆ ಹಾಸ್ಯಾಸ್ಪದವಾಗಿದೆ. 50 ಶಾಸಕರಿಗೆ ತಲಾ ₹50 ಕೋಟಿ ಎಂದು ಅಷ್ಟು ನಿಖರವಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಸಿಎಂ ಬಳಿ ಎಲ್ಲಾ ಮಾಹಿತಿ ಇದೆ ಎಂದಾಯಿತು. ಕಾಂಗ್ರೆಸ್ ಸರಕಾರ ಪ್ರತಿಯೊಂದಕ್ಕೂ ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದಾರೆ. ಶಾಸಕರ ಖರೀದಿ ವಿಷಯಕ್ಕೂ ಒಂದು ಎಸ್‌ಐಟಿ ರಚನೆ ಮಾಡಲಿ” ಎಂದು ಲೇವಡಿ ಮಾಡಿದರು.

“ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಜಯಶಾಲಿ ಆಗುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನೇನು ಆಗಿದೆ ಎಂದು ಸ್ವತಃ ಯೋಗೇಶ್ವರ್ ಅವರೇ ಹೇಳಿದ್ದಾರೆ. ಅದರ ಬಗ್ಗೆ ನಾನೇನು ವಿಮರ್ಶೆ ಮಾಡುವುದಿಲ್ಲ. ಜಮೀರ್ ಹೇಳಿಕೆಯಿಂದ ಏನಾಗಿದೆ ಎನ್ನುವುದು ಫಲಿತಾಂಶ ಬರುವ ದಿನ ಗೊತ್ತಾಗುತ್ತದೆ” ಎಂದರು

ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕರು ನಾಯಕರು ಕೇಂದ್ರ ಸಚಿವರ ಜತೆಯಲ್ಲಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments