2010, 2011, 2012ರಲ್ಲಿ ನಿಗಮಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಇದಾದ ಮೇಲೆ 2013ರಲ್ಲಿ ಅವರದ್ದೆ ಸರ್ಕಾರ ಇದ್ದಾಗ ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿ ಆಡಳಿತದಲ್ಲಿ ಹಗರಣಗಳು ನಡೆದಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಏಕೆ ಸುಮ್ಮನಿದ್ದರು? ತಮ್ಮ ತಪ್ಪು ಮುಚ್ಚಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೆ” ಎಂದು ಕಿಡಿಕಾರಿದರು.
“ಒಂದು ವರ್ಷದಿಂದ ಏಕೆ ಕ್ರಮ ಕೈಗೊಂಡಿಲ್ಲ. ಈಗ ತನಿಖೆ ಮಾಡುವುದಾಗಿ ಗುಮ್ಮ ಬಿಟ್ಟಿದ್ದಾರೆ. ಸರ್ಕಾರ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮುಖ್ಯಮಂತ್ರಿ ನೈತಿಕತೆ ಉಳಿಸಿಕೊಂಡಿಲ್ಲ. ಸಾರ್ವಜನಿಕವಾಗಿ ಮುಖ ತೋರಿಸಲು ಆಗದ ಸ್ಥಿತಿಯಲ್ಲಿದ್ದಾರೆ” ಎಂದು ಲೇವಡಿ ಮಾಡಿದರು.
“ತಮ್ಮ ಹೆಸರು ಹೇಳುವಂತೆ ಇ.ಡಿ. ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಯಾರು ಹೇಳಿದರು? ಪ್ರಕರಣದಲ್ಲಿ ಇವರು ಭಾಗಿಯಾಗಿಲ್ಲವೆಂದರೆ ಏಕೆ ಗಾಬರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ, ಇವರೇ ಏಕೆ ಊಹೆ ಮಾಡಿಕೊಳ್ಳುತ್ತಿದ್ದಾರೆ, ನಾಲ್ಕು ಜನ ಸಚಿವರಿಂದ ಏಕೆ ಹೇಳಿಕೆ ಕೊಡಿಸಿದ್ದಾರೆ” ಎಂದರು.
“ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ. ಅಧಿಕಾರಗಳಿಂದ ತಪ್ಪಾಗಿದ್ದರೂ ಸರ್ಕಾರವೇ ಹೊಣೆ. ಸಚಿವರು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೃತ ಅಧಿಕಾರಿ ಡೆತ್ ನೋಟ್ ನಲ್ಲಿ ಬರೆದುದರ ಅರ್ಥ ಏನು? ಸಿಎಂ ಉಡಾಫೆಯಿಂದ ಉತ್ತರ ಕೊಟ್ಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯದ ಕರಾವಳಿ ಭಾಗದಲ್ಲಿ, ಚಿಕ್ಕಮಗಳೂರು, ಕೊಡಗಿನಲ್ಲಿ ಅಪಾರ ಮಳೆಯಾಗಿ ಸಾಕಷ್ಟು ಹಾನಿಯಾಗಿದ್ದರೂ ಸಿಎಂ ಹಾಗೂ ಸಚಿವರು ಸ್ಥಳಕ್ಕೆ ಭೇಟಿ ನೀಡದಿರುವುದು ಆಶ್ಚರ್ಯ ತಂದಿದೆ. ಜನರ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ಇದು ತೋರಿಸುತ್ತದೆ” ಎಂದು ಟೀಕಿಸಿದರು.