ನಿಮಗೆ ಸ್ಥಳೀಯ ಸಂಸದರು ಬೇಕಾ ಅಥವಾ ಹೊರಗಿನ ಸಂಸದರು ಬೇಕಾ? ಮನೆಯ ಮಗ ಬೇಕಾ ಅಥವಾ ಬೀಗರು ಬೇಕಾ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೇಳಿದ್ದಾರೆ. ಆಯ್ಕೆ ಮತ್ತು ತೀರ್ಮಾನ ನಿಮ್ಮದು. ನಿಮ್ಮ ಜವಾಬ್ದಾರಿ ನಿಮ್ಮ ಹಸ್ತದಲ್ಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಳಗಾವಿಯ ಯರಗಟ್ಟಿತಾಲೂಕಿನ ಉಗಾರಖುರ್ದದಲ್ಲಿ ನಡೆದ ಪ್ರಜಾಧ್ವನಿ 2 ಯಾತ್ರೆಯಲ್ಲಿ ಅವರು ಮಾತನಾಡಿ, “ಬಿಜೆಪಿಯವರು ಅವರು ಏನು ಕೊಟ್ಟಿದ್ದಾರೆ ಬಿಟ್ಟಿದ್ದಾರೆ ಬೇರೆ ವಿಚಾರ. ಕೋವಿಡ್ ಸಂದರ್ಭದಲ್ಲಿ ನಾವು 3 ವರ್ಷಗಳ ಕಾಲ ನರಳಾಡಿದೆವು. ಈ ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್ ಗೆ ಬಲಿಯಾದರು. ಆಗ ಅವರ ಪಾರ್ಥೀವ ಶರೀರವನ್ನು ಈ ಊರಿಗೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಜೆಸಿಬಿಯಲ್ಲಿ ಅವರ ದೇಹವನ್ನು ಗುಂಡಿಗೆ ಹಾಕಿ ಮುಚ್ಚಿದರು. ತಮ್ಮ ಬೀಗರಿಗೆ ಸರಿಯಾದ ಅಂತ್ಯ ಸಂಸ್ಕಾರ ಮಾಡಲು ಜಗದೀಶ್ ಶೆಟ್ಟರ್ ಅವರಿಂದ ಸಾಧ್ಯವಾಗಲಿಲ್ಲ. ಇದು ಶೆಟ್ಟರ್ ಅವರ ಸಾಧನೆ” ಎಂದು ಟೀಕಿಸಿದರು.
“ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಪಕ್ಷ ಸೇರಿ, ಟಿಕೆಟ್ ಪಡೆದು ಸ್ಪರ್ಧೆ ಮಾಡಿ ಸೋತು, ನಂತರ ವಿಧಾನ ಪರಿಷತ್ ಸದಸ್ಯರಾದ ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ವಾಪಸ್ ಹೋಗಿದ್ದು ಶೆಟ್ಟರ್ ಅವರ ಮತ್ತೊಂದು ಸಾಧನೆ. ಹೀಗಾಗಿ ಅವರು ಈ ಭಾಗದಿಂದ ಅವರು ಸಂಸದರಾಗಲು ಅರ್ಹರಲ್ಲ” ಎಂದು ಕಿಡಿಕಾರಿದರು.
“ಕೇಂದ್ರ ಬಿಜೆಪಿ ಸರ್ಕಾರ ಮಹಾದಾಯಿ ಯೋಜನೆಗೆ ನಮಗೆ ಅನುಮತಿ ನೀಡಲಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ರೈತರ ಆದಾಯ ಡಬಲ್ ಮಾಡಲಿಲ್ಲ. ನಿಮ್ಮ ಖಾತೆಗೆ 15 ಲಕ್ಷ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಲಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ದೇಶದ ಪ್ರಧಾನಮಂತ್ರಿಗಳು ಜಾತಿ, ಧರ್ಮ ವ್ಯವಸ್ಥೆ ಹಾಗು ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಎಲ್ಲಾ ವರ್ಗ, ಸಮುದಾಯದ ಜನರಿಗೂ ಮೀಸಲಾತಿ ನೀಡುತ್ತಾ ಬಂದಿದ್ದೇವೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಅವರಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕಾನೂನು ತರಲಾಯಿತು. ದೇಶದಲ್ಲೇ ಮೊದಲ ಬಾರಿಗೆ ಇಂತಹ ಕ್ರಾಂತಿಕಾರಿ ಹೆಜ್ಜೆ ಇಟ್ಟ ರಾಜ್ಯ ಕರ್ನಾಟಕ ಹಾಗೂ ಕಾಂಗ್ರೆಸ್ ಸರ್ಕಾರ” ಎಂದರು.
“ಕುಮಾರಣ್ಣ ಈ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿದರು. ಇದಕ್ಕೆಲ್ಲ ನೀವೇ ಮೇ 7ರಂದು ನಡೆಯುವ ಮತದಾನದ ದಿನ ನೀವು ಉತ್ತರ ನೀಡಬೇಕು” ಎಂದು ಹೇಳಿದರು.
“ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗು ರಾಹುಲ್ ಗಾಂಧಿ ಅವರು ಐದು ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷ ಹಾಗು ತರಬೇತಿ, 25 ಲಕ್ಷದ ವರೆಗೆ ಆರೋಗ್ಯ ವಿಮೆ, ರೈತರ ಸಾಲಮನ್ನಾ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ಗ್ಯಾರಂಟಿ ನೀಡಿದ್ದೇವೆ” ಎಂದರು.