ಜೆ ಪಿ ನಡ್ಡಾ ಅವರೇ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದಾಗ ನಿಮ್ಮ ಸತ್ಯಶೋಧನೆ ತಂಡ ಹೋಗಲಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕುಟುಕಿರುವ ಕಾಂಗ್ರೆಸ್, “ಉತ್ತರ ಪ್ರದೇಶದ ದಲಿತರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಸತ್ಯಶೋಧನೆ ಮಾಡಲಿಲ್ಲವೇಕೆ? ಮಧ್ಯಪ್ರದೇಶದಲ್ಲಿ ಬಾಲಕಿಯನ್ನು ಅತ್ಯಾಚಾರವೆಸಗಿ ಬೆತ್ತಲೆ ಮಾಡಿ ರಸ್ತೆಗೆ ಅಟ್ಟಿದಾಗ ಹೋಗಲಿಲ್ಲವೇಕೆ?” ಎಂದು ಕೇಳಿದೆ.
“ಹತ್ರಾಸ್‌ನಲ್ಲಿ ಬಿಜೆಪಿ ಶಾಸಕನೇ ಅತ್ಯಾಚಾರ ಮಾಡಿದಾಗ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗ ನಿಮಗೆ ಮಹಿಳೆಯರ ಬಗ್ಗೆ ಕಾಳಜಿ ಹುಟ್ಟಲಿಲ್ಲ ಏಕೆ? ಅಲ್ಲೆಲ್ಲಾ ಇದ್ದಿದ್ದು ನಿಮ್ಮದೇ ಸರ್ಕಾರ ಎಂಬ ಕಾರಣಕ್ಕೆ, ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸತ್ಯಶೋಧನೆ ಮಾಡುವ ಮನಸಾಗಲಿಲ್ಲವೇ?” ಎಂದು ಕುಟುಕಿದೆ.
“ಸಂಸತ್ ದಾಳಿ ಪ್ರಕರಣದಿಂದ ಪ್ರತಾಪ್ ಸಿಂಹನನ್ನು ರಕ್ಷಿಸಲು ಈಗ ಸದಾರಮೆ ನಾಟಕ ಶುರು ಮಾಡಿದ ಬಿಜೆಪಿಗೆ ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲ!” ಎಂದು ವಾಗ್ದಾಳಿ ನಡೆಸಿದೆ.
“ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣದಲ್ಲಿ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಸಂತ್ರಸ್ತ ಮಹಿಳೆಗೆ 5 ಲಕ್ಷ ಪರಿಹಾರ ನೀಡಿದೆ. ಸಂತ್ರಸ್ತೆಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ” ಎಂದು ತಿಳಿಸಿದೆ.
ಬಿಜೆಪಿಯಲ್ಲಿ ಅತ್ಯಾಚಾರಿ ಮೋರ್ಚಾ
“ಬಲಾತ್ಕಾರಿ ಜನತಾ ಪಾರ್ಟಿಯ ಉತ್ತರ ಪ್ರದೇಶದ ಶಾಸಕನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ನ್ಯಾಯಾಲಯ ತೀರ್ಪು ನೀಡಿದೆ. ಹತ್ರಾಸ್ ಅತ್ಯಾಚಾರ ಪ್ರಕರಣದ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ದೋಷಿಯಾದ ನಂತರ ಉತ್ತರಪ್ರದೇಶದಲ್ಲಿ ಇದು ಎರಡನೇ ಪ್ರಕರಣ. ಬಿಜೆಪಿಯಲ್ಲಿ “ಅತ್ಯಾಚಾರಿ ಮೋರ್ಚಾ“ ಎಂಬ ಘಟಕ ಸೃಷ್ಟಿಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ! ಡಿಯರ್ ಬಿಜೆಪಿ
ನೀವು ಸತ್ಯಶೋಧನೆ ಮಾಡಬೇಕಾಗಿದ್ದಿದ್ದು ಉತ್ತರ ಪ್ರದೇಶದಲ್ಲಿ!” ಎಂದು ವ್ಯಂಗ್ಯವಾಡಿದೆ.
ಬಿಜೆಪಿ ನಿಜಕ್ಕೂ ಸತ್ಯಶೋಧನೆ ಮಾಡುವುದಿದ್ದರೆ ಈ ಸಂಗತಿಗಳ ಶೋಧನೆ ಮಾಡಲಿ. ಪ್ರತಾಪ್ ಸಿಂಹರವರ ಐಟಿ ಸೆಲ್ ನಲ್ಲಿ ಮನೋರಂಜನ್ ಮಾಡುತ್ತಿದ್ದ ಕೆಲಸ ಯಾವುದು? ಸಂಸತ್ ದಾಳಿ ಆರೋಪಿಗಳಿಗೆ ಪ್ರತಾಪ್ ಸಿಂಹ ಮೂರು ಬಾರಿ ಪಾಸ್ ಕೊಟ್ಟಿದ್ದೇಕೆ? ಅವರ ನಡುವೆ ಇದ್ದ ಆತ್ಮೀಯತೆಯ ಹುರುಳೇನು? ಆರೋಪಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಪ್ರತಾಪ್ ಸಿಂಹ ಅವರ ವಿಚಾರಣೆ ಮಾಡದಿರುವುದೇಕೆ? ಈ ವಿಚಾರಗಳ ಸತ್ಯಶೋಧನೆ ಮಾಡಿ ರಾಜ್ಯದ ಜನತೆಗೆ ಸತ್ಯ ತಿಳಿಸಲಿ” ಎಂದು ಕಾಂಗ್ರೆಸ್ ಆಗ್ರಹಿಸಿದೆ.