ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ? ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.
“ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡ್ತೀವಿ ಅಂದ್ರಲ್ಲಾ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ? ಮಾಡಿದ್ರಾ ಮೋದಿಯವರೇ” ಎಂದು ಪ್ರಶ್ನಿಸಿದರು.
“ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಮಿಸ್ಟರ್ ಮೋದಿ? ನಿಮ್ಮ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡಬೇಕು ಎನ್ನುವ ಕಾರಣದಿಂದ ಐದು ಗ್ಯಾರಂಟಿ ಜಾರಿ ಮಾಡಿದೆವು. ಪ್ರತೀ ಕುಟುಂಬಕ್ಕೆ 4 ರಿಂದ 6 ಸಾವಿರ ರೂಪಾಯಿ ಉಳಿತಾಯವಾಗಿ ನನ್ನ ಜನರ ಕೊಳ್ಳುವ ಶಕ್ತಿ ಹೆಚ್ಚಾಯಿತು. ಇದು ನಮ್ಮ ಸಾಧ್ಯವಾಗಿದ್ದು ಕಾಂಗ್ರೆಸ್ ಸರ್ಕಾರದಿಂದ ಮಿಸ್ಟರ್ ಮೋದಿಯವರೇ” ಎಂದು ಕುಟುಕಿದರು.
“ಈ ದೇಶದ ಶೇ 95 ರಷ್ಟು ಬಹುಸಂಖ್ಯಾತ ಜನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿರುವುದು ನಮ್ಮ ಸಂವಿಧಾನ. ಈ ಸಂವಿಧಾನವನ್ನು ಬದಲಾಯಿಸುತ್ತೀವಿ ಎನ್ನುವುದು ಬಿಜೆಪಿಯ ಅಜೆಂಡಾ. ಇದನ್ನು ಬಿಜೆಪಿ ಕೇಂದ್ರ ಸಚಿವರಾಗಿದ್ದವರೇ ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಜಾರಿಗೆ ತರಲು ಅವಕಾಶ ಕೊಡಬೇಡಿ” ಎಂದು ಕರೆ ನೀಡಿದರು.
“ಅಧಿಕಾರದಲ್ಲಿದ್ದಾಗ ಹಣ ಲೂಟಿ ಮಾಡೋದು, ಆಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ಅವರ ಅವಕಾಶ. ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಕಾರಜೋಳ ಅವರು ಇಲ್ಲಿಯವರಲ್ಲ. ಕಾಂಗ್ರೆಸ್ ಚಂದ್ರಪ್ಪ ಅವರು ಸೋತಾಗಲೂ ಜನರ ನಡುವೆ ಇದ್ದು ತಪಸ್ಸಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ಕಾರಜೋಳ ಅವರು ಹಿಂದುಳಿದವರು, ದಲಿತರು, ಶ್ರಮಿಕರು, ದುಡಿಯುವ ವರ್ಗಗಳಿಗೆ ಏನೇನೂ ಮಾಡಿಲ್ಲ. ಕಾರಜೋಳ ಅವರ ಬಳಿ ಸಿಕ್ಕಾಪಟ್ಟೆ ಹಣ ಇರಬಹುದು. ಆದರೆ ಚಂದ್ರಪ್ಪ ಅವರಲ್ಲಿ ಜನಸೇವೆ ಮಾಡುವ ಸಜ್ಜನಿಕೆ, ಕಾಳಜಿ ಇದೆ. ಆದ್ದರಿಂದ ಚಿತ್ರದುರ್ಗದ ಜನತೆ ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಒಕ್ಕೋರಲಿನಿಂದ ಹೇಳಬೇಕು” ಎಂದು ವಿನಂತಿಸಿದರು.
ಬಿಜೆಪಿ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ
“ಬಿಜೆಪಿ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ರಾಜ್ಯಕ್ಕೆ ಪ್ರವಾಹ ಬಂದಾಗ, ಬರಗಾಲ ಬಂದಾಗ ರಾಜ್ಯದ ಜನರ ಕಡೆ ತಿರುಗಿ ಕೂಡ ನೋಡಲಿಲ್ಲ. ರಾಜ್ಯದ ಪಾಲಿನ ಬರಗಾಲದ ಅನುದಾನವನ್ನು ಒಂದು ರೂಪಾಯಿ ಕೂಡ ಕೊಡಲಿಲ್ಲ. ರಾಜ್ಯಕ್ಕೆ ಆದ ಅನ್ಯಾಯವನ್ನು ಬಿಜೆಪಿ ಸಂಸದರು ನೆಪಕ್ಕೂ ಪ್ರಶ್ನಿಸಲಿಲ್ಲ. ರಾಜ್ಯದ ನೀರಾವರಿಗೆ ಹಣ ಕೊಡ್ತೀವಿ ಅಂತ ಕೇಂದ್ರ ಬಜೆಟ್ ನಲ್ಲೂ ಘೋಷಿಸಿದರು. ಅದರಲ್ಲಿ ಒಂದು ರೂಪಾಯಿಯನ್ನೂ ನಮ್ಮ ರಾಜ್ಯಕ್ಕೆ ಕೊಡಲಿಲ್ಲ. ಮೇಲಿಂದ ಮೇಲೆ ರಾಜ್ಯಕ್ಕೆ ದ್ರೋಹ ಮಾಡುತ್ತಿರುವ ತಕ್ಕ ಪಾಠ ಕಲಿಸಿ” ಎಂದರು.
ಹಸಿ ಸುಳ್ಳುಗಾರ ಅಮಿತ್ ಶಾ
ಆರ್‌ಎಸ್‌ಎಸ್‌ನಲ್ಲಿ ಈ ಬಿಜೆಪಿಯವರಿಗೆ ಸುಳ್ಳು ಹೇಳುವ ತರಬೇತಿ ಕೊಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ತಿರುಗ್ತಾ ಇದಾರೆ. ರಾಜ್ಯದ ಜನರ ಪಾಲಿನ ಬರಗಾಲದ ಹಣ ಏಕೆ ವಾಪಾಸ್ ಕೊಡಲಿಲ್ಲ ಎಂದು ನಾಡಿನ ಜನತೆ ಪ್ರಶ್ನೆ ಕೇಳಿದ್ರು. ಆದರೆ ರಾಜ್ಯ ಸರ್ಕಾರ ಮೂರು ತಿಂಗಳು ಲೇಟಾಗಿ ಮನವಿ ಮಾಡಿದ್ದಾಗಿ ಅಮಿತ್ ಶಾ ಭಯಾನಕ ಹಸಿ ಸುಳ್ಳು ಹೇಳಿದರು” ಎಂದು ವಾಗ್ದಾಳಿ ನಡೆಸಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಲೋಕಸಭಾ ಅಭ್ಯರ್ಥಿ ಚಂದ್ರಪ್ಪ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ,ವೀರೇಂದ್ರ ಪಪ್ಪಿ, ಪಾವಗಡ ವೆಂಕಟೇಶ್, ಗೋವಿಂದಪ್ಪ, ಬಸಂತಪ್ಪ ಸೇರಿ ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು ಹಾಗೂ ಜಿಲ್ಲೆ ಮತ್ತು ತಾಲ್ಲೂಕು , ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.