ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಸಭೆ ನಡೆಸಿದ ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು, ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿದೆ. ಸಿಬಿಐ, ಎನ್‌ಎಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಈ ಪಟ್ಟಿಯಲ್ಲಿ 35 ಅಧಿಕಾರಿಗಳಿದ್ದು, ಕರ್ನಾಟಕದಿಂದ ಪ್ರಣಬ್ ಮೊಹಂತಿ ಮಾತ್ರ ಇದ್ದಾರೆ.
ಧರ್ಮಸ್ಥಳ ಗ್ರಾಮದ ವಿವಿಧೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೋರ್ವ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ರಚಿಸಿರುವ ಎಸ್‌ಐಟಿಯನ್ನು ಪ್ರಣಬ್ ಮೊಹಂತಿ ಅವರು ಮುನ್ನಡೆಸುತ್ತಿದ್ದಾರೆ.
ಸಚಿವ ಪರಮೇಶ್ವರ್ ಹೇಳಿದ್ದೇನು?
“ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಮುಖ್ಯಸ್ಥರಾಗಿರುವ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರನ್ನು ಬದಲಾಯಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ” ಎಂದು ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿದ್ದಾರೆ.
ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದ್ದು, ಅವರನ್ನು ಬದಲಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
“ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಕಾನೂನು ಪ್ರಕಾರ, ಏನು ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಣಬ್ ಮೊಹಾಂತಿ ಕೇಂದ್ರ ಸೇವೆಗೆ ನಿಯೋಜನೆಗೊಂಡರೂ ಕೂಡ ಎಸ್‌ಐಟಿ ತನಿಖೆಯನ್ನು ಮುಂದುವರೆಸಬಹುದೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ” ಎಂದರು.
‘ಕೇಂದ್ರದಲ್ಲಿ ಸೇವೆ ಸಲ್ಲಿಸಬೇಕಾಗಿ ಬಂದರೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಅವರು ಮುಂದುವರಿಯಬಹುದೇ ಅಥವಾ ಅವರನ್ನು ಬದಲಾಯಿಸಬೇಕೇ ಎಂಬ ಬಗ್ಗೆ ನಾವು ಚರ್ಚಿಸುತ್ತೇವೆ. ಕಾನೂನು ಅನುಮತಿಸಿದರೆ ಅವರು ಎಸ್‌ಐಟಿ ಮುಖ್ಯಸ್ಥರಾಗಿ ಮುಂದುವರಿಯಬಹುದು. ಒಂದು ವೇಳೆ ಅವರನ್ನು ಬದಲಿಸಬೇಕಾಗಿ ಬಂದರೆ, ಸರ್ಕಾರ ಅದೇ ಶ್ರೇಣಿಯ ಅಧಿಕಾರಿಯನ್ನು ನೇಮಿಸುತ್ತದೆ’ ಎಂದು ಪರಮೇಶ್ವರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನಡೆದ ಹತ್ಯೆ, ಅತ್ಯಾಚಾರ ಮತ್ತು ಸಾಮೂಹಿಕ ಅಂತ್ಯಕ್ರಿಯೆಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ಎಸ್‌ಐಟಿಯನ್ನು ರಚಿಸಿದೆ. 1995 ಮತ್ತು 2014ರ ನಡುವೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ. ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರು ಸೇರಿದಂತೆ ಹಲವಾರು ಶವಗಳನ್ನು ಹೂಳಲು ನನ್ನನ್ನು ಒತ್ತಾಯಿಸಲಾಯಿತು ಎಂದು ಗುರುತು ಬಹಿರಂಗಪಡಿಸದ ಮಾಜಿ ಪೌರ ಕಾರ್ಮಿಕರೊಬ್ಬರು ಹೇಳಿದ್ದಾರೆ.
ತಾನು ಹೂತು ಹಾಕಿರುವ ಕೆಲವು ಮೃತದೇಹಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಲಕ್ಷಣಗಳು ಕಂಡುಬಂದಿದ್ದವು ಎಂದು ಅವರು ಆರೋಪಿಸಿದ್ದು, ಈ ಸಂಬಂಧ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತಾ ವಿಭಾಗ) ಮೊಹಂತಿ ನೇತೃತ್ವದ ಎಸ್‌ಐಟಿಯಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕ (ನೇಮಕಾತಿ) ಎಂಎನ್ ಅನುಚೇತ್ ಮತ್ತು ಐಪಿಎಸ್ ಅಧಿಕಾರಿಗಳಾದ ಸೌಮ್ಯಲತಾ ಎಸ್ ಕೆ ಮತ್ತು ಜಿತೇಂದ್ರ ಕುಮಾರ್ ದಯಾಮ ಅವರು ಇದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಿಂದ 20 ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳು, ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳನ್ನು ಸಹ ಎಸ್‌ಐಟಿಗೆ ನಿಯೋಜಿಸಲಾಗಿದೆ.