ವಿಜಯೇಂದ್ರ ಯಡಿಯೂರಪ್ಪ ಅವರ ಜೊತೆ ಸೇರಿ ಜನರ ಸಮಸ್ಯೆ ನಿವಾರಣೆಗೆ ಮತ್ತು ಪಕ್ಷ ಸಂಘಟನೆಗೆ ಜೋಡೆತ್ತಿನಂತೆ ದುಡಿಯುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ಕಾಂಗ್ರೆಸ್ ದುರಾಡಳಿತ, ಮೋಸದ ಯೋಜನೆಗಳ ಕುರಿತು ತಿಳಿಸಿ ಜನಜಾಗೃತಿ ಮೂಡಿಸುತ್ತೇವೆ” ಎಂದರು.
“ಮಂಗಳೂರು- ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಗಡೀಪಾರು ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 30-40 ಹಿಂದೂ ಕಾರ್ಯಕರ್ತರ ಕೊಲೆ ಆಗಿತ್ತು. ಟಿಪ್ಪುವಿನ ವೈಭವೀಕರಣ ನಡೆದಿತ್ತು. ಕಾಂಗ್ರೆಸ್ಸಿನ ಮತಾಂಧನಾದ ಟಿಪ್ಪು ಸಂಸ್ಕೃತಿಯನ್ನು ಪಕ್ಷ ಜನರಿಗೆ ತಿಳಿಸಲಿದೆ” ಎಂದು ತಿಳಿಸಿದರು.
“ಜಮೀರ್ ಅವರು ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ. ಹತ್ತಾರು ತಪ್ಪುಗಳನ್ನು ಕಾಂಗ್ರೆಸ್ ಸರಕಾರ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ನಾವು ಇವುಗಳ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
“ಸಂಕಷ್ಟದಲ್ಲಿರುವ ರೈತರಿಗೆ ಅವರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಈಗಿನ ಸರಕಾರ ನಯಾಪೈಸೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರದ ಕಿವಿ ಹಿಂಡುವ ಕಾರ್ಯ ಮಾಡುತ್ತೇವೆ” ಎಂದರು.
“ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರ ನೇಮಕಾತಿಯಿಂದ ಕಾಂಗ್ರೆಸ್ಸಿಗರಿಗೆ ನಡುಕ ಉಂಟಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ ಎಂಬ ಮಾತು ಕೇಳಿಬರಲಾರಂಭಿಸಿದೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲು ಪಕ್ಷ ಅವಕಾಶ ನೀಡಿದೆ” ಎಂದು ತಿಳಿಸಿದರು.
“ಉಳಿದ ಶಾಸಕರ ಜೊತೆ ಒಗ್ಗಟ್ಟಾಗಿ ಮುಂದಿನ ಅಧಿವೇಶನದಲ್ಲಿ ಕೆಲಸ ಮಾಡಲಿದ್ದೇನೆ. ಬೆಳಿಗ್ಗೆ ನಾನು ಬಸವರಾಜ ಬೊಮ್ಮಾಯಿ, ಡಾ. ಅಶ್ವತ್ಥನಾರಾಯಣ್ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಒಂದಾಗಿ ಸತ್ತು ಹೋದ ಆಡಳಿತಕ್ಕೆ ಚುರುಕು ಮುಟ್ಟಿಸಲಿದ್ದೇವೆ” ಎಂದು ಎಚ್ಚರಿಸಿದರು.