Homeಕರ್ನಾಟಕಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಕಡಿಮೆ ಮಾಡಿ, ಪ್ರಾಮಾಣಿಕನ್ನು ತುಂಬುತ್ತೇವೆ: ಸಿದ್ದರಾಮಯ್ಯ

ಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಕಡಿಮೆ ಮಾಡಿ, ಪ್ರಾಮಾಣಿಕನ್ನು ತುಂಬುತ್ತೇವೆ: ಸಿದ್ದರಾಮಯ್ಯ

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಸದಸ್ಯರ ಸಂಖ್ಯೆ ಕಡಿಮೆ ಮಾಡುವುದು, ಸದಸ್ಯರ ಆಯ್ಕೆಗೆ ಸರ್ಚ್ ಕಮಿಟಿ ರಚಿಸುವುದು, ಮುಂದೆ ಆದಷ್ಟು ಪ್ರಾಮಾಣಿಕವಾಗಿ ಇರುವವರನ್ನು ನೇಮಕ ಮಾಡಲು ಪ್ರಯತ್ನ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ನೀಡಿದರು.

“ಮರು ಪರೀಕ್ಷೆ ಮಾಡಿ ಎಂದು ಸೂಚನೆ ಕೊಡಲು ಈಗ ಸಾಧ್ಯವಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಮರು ಪರೀಕ್ಷೆಗೆ ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ ಮಾಡಲಾಗುವುದು. ಮರು ಪರೀಕ್ಷೆ ಬಗ್ಗೆ ಕೋರ್ಟ್ ಸೂಚನೆ ಬರದಿದ್ದರೆ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.

“ತಪ್ಪು ಭಾಷಾಂತರದಿಂದ ಅನ್ಯಾಯಕ್ಕೆ ಒಳಗಾದವರ ಪರವಾಗಿ ನಾವಿದ್ದೇವೆ. ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಪರೀಕ್ಷೆ, ನೇಮಕಾತಿ ನಡೆಸಲು ಕ್ರಮ ವಹಿಸಲಾಗುವುದು. ಕೆಪಿಎಸ್‌ಸಿನಲ್ಲಿ ಹಲವು ಬಾರಿ ನಾನಾ ಗೊಂದಲಗಳಾಗಿ, ನ್ಯಾಯಾಲಯಗಳ ಮೆಟ್ಟಿಲು ಏರಿರುವ ಚರಿತ್ರೆ ಇದೆ. ಭ್ರಷ್ಟಾಚಾರದಿಂದ ಕೆಪಿಎಸ್‌ಸಿ ಹೊರಗೆ ಹೋಗಬೇಕು. ಇದರ ಬಗ್ಗೆ ಎರಡು ಮಾತಿಲ್ಲ” ಎಂದರು.

“ಆರ್.ಅಶೋಕ್ ಮತ್ತು ವಿರೋಧ ಪಕ್ಷದ ಸದಸ್ಯರುಗಳು ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಸ್ತುತ ನಡೆಯುತ್ತಿರುವ ಗೆಜೆಟೆಡ್ ಪ್ರೊಬೇಷನರ್ಸ್‌ ಪರೀಕ್ಷೆಯಲ್ಲಿ ಕನ್ನಡ ಅನುವಾದಗಳನ್ನು ತಪ್ಪು ಮಾಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಪ್ಪು ಮಾಡಿದ ಕಾರಣದಿಂದ ಉಂಟಾಗಿರುವ 30 ಕೋಟಿ ರೂ. ನಷ್ಟವನ್ನು ತಪ್ಪಿತಸ್ಥರಿಂದ ವಸೂಲು ಮಾಡಬೇಕು. ಪರೀಕ್ಷೆ ನಡೆಸಲು ಈ ಹಿಂದೆ ಮಾಡಿರುವ ಅಧಿಸೂಚನೆಯನ್ನು ರದ್ದು ಮಾಡಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕೆಪಿಎಸ್‌ಸಿಯ ಸಮಗ್ರ ಬದಲಾವಣೆಯಾಗಬೇಕು ಎಂದೂ ಸಹ ಸಲಹೆ ನೀಡಿದ್ದಾರೆ. ಕೆಪಿಎಸ್‌ಸಿ ಸರಿಯಾಗಬೇಕು ಎಂಬ ಈ ಸದನದ ಕಳಕಳಿ ಸರಿಯಾಗಿದೆ. ನಮ್ಮ ಸರ್ಕಾರದ ಕಳಕಳಿ ಕೂಡ ಅದೇ ಆಗಿದೆ. ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಕಳಂಕರಹಿತವಾಗಿರಬೇಕು, ದಕ್ಷರೂ, ಪ್ರಾಮಾಣಿಕರೂ ಆದ ಅಧಿಕಾರಿಗಳು ರಾಜ್ಯದ ಆಡಳಿತ ಸೇವೆಗೆ ಬರಬೇಕು ಎಂಬ ಉದ್ದೇಶ, ಕಳಕಳಿ ನಮ್ಮದೂ ಆಗಿದೆ” ಎಂದರು.

“ದೊಡ್ಡ ಪರಂಪರೆಯುಳ್ಳ ಕರ್ನಾಟಕ ಆಡಳಿತ ಸೇವೆಗೆ ಸೇರಬಯಸುವ ಅಧಿಕಾರಿಗಳ ಆಯ್ಕೆ ಮಾಡಿಕೊಡುವುದರಲ್ಲಿ ಆಯೋಗವು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿದೆ. ಕೆಪಿಎಸ್‌ಸಿಯನ್ನು ಸರಿಪಡಿಸಬೇಕು. ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಡಬೇಕು ಎಂಬ ಉದ್ದೇಶದಿಂದ 2013 ರ ಜುಲೈನಲ್ಲಿ ನಮ್ಮ ಸರ್ಕಾರವೇ ಪಿ.ಸಿ ಹೋಟಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೆವು. ಸಮಿತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾಗಿದ್ದ ಕೌಶಿಕ್ ಮುಖರ್ಜಿ ಮತ್ತು ಸಂಜೀವ್ ಕುಮಾರ್ ಅವರು ಸದಸ್ಯರಾಗಿದ್ದರು. ಈ ಸಮಿತಿಯು ನೀಡಿದ್ದ ಬಹುಪಾಲು ಶಿಫಾರಸ್ಸುಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೆವು” ಎಂದು ಹೇಳಿದರು.

1997 ರಿಂದ 2011 ರವರೆಗಿನ ಹಲವು ಪರೀಕ್ಷೆಗಳಲ್ಲಿ ನಡೆದಿದ್ದ ಅವ್ಯವಸ್ಥೆಗಳ ಕಾರಣದಿಂದಲೇ ಈ ಸಮತಿಯನ್ನು ರಚಿಸಿದ್ದೆವು. ಹೋಟಾ ಸಮಿತಿಯ ಶಿಫಾರಸ್ಸುಗಳಲ್ಲಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹೊರ ರಾಜ್ಯದವರಾಗಿರಬೇಕು ಎಂಬ ಅಂಶವೂ ಇತ್ತು. ಅದನ್ನೂ ಅನುಷ್ಠಾನ ಮಾಡಲಾಗಿದೆ. ಈ ಅಧಿಕಾರಿಗಳಿಗೆ ಕನ್ನಡದ ಜ್ಞಾನದ ಕೊರತೆಯೂ ಇರುತ್ತದೆ. ಜನರ ಸಂಪರ್ಕ ಹೆಚ್ಚು ಇರದ, ನೆಂಟರು, ಇಷ್ಟರು ಮುಂತಾದ ಬಾಧ್ಯತೆಗಳಿಲ್ಲದವರು ಈ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಆಗಬೇಕೆಂಬುದು ಪಿ.ಸಿಹೋಟಾ ಸಮಿತಿಯ ಶಿಫಾರಸ್ಸು. ಸದುದ್ದೇಶದ ಕಾರಣದಿಂದ ಇದನ್ನು ಮಾಡಲಾಗಿದೆ. ಹಾಗಿದ್ದರೆ ಸಮಸ್ಯೆಗಳೆಲ್ಲಿ ಆಗಿವೆ ಎಂದು ಅಧಿಕಾರಿಗಳಲ್ಲಿ ಕೇಳಿದೆ. ಪ್ರಶ್ನೆಗಳನ್ನು ತಯಾರಿಸುವ ಕರ್ನಾಟಕದ ಅಧ್ಯಾಪಕರುಗಳಿಗೆ ಕನ್ನಡ ಅನುವಾದ ಮಾಡಲಾಗದ ದುಸ್ಥಿತಿ ಇದೆ ಎಂದರು. ಇಂಗ್ಲೀಷಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ” ಎಂದರು.

“ಇದನ್ನೆಲ್ಲ ಆಯೋಗವು ಸೂಕ್ಷ್ಮವಾಗಿ ನಿಭಾಯಿಸಬೇಕು. ಈ ಕಾರಣಕ್ಕೆ ಆಯೋಗವನ್ನು ನೇಮಿಸಲಾಗಿರುತ್ತದೆ. ಸಿದ್ಧಪಡಿಸುವ ಪ್ರಶ್ನೆಗಳು ಪರೀಕ್ಷೆಗೆ ಮೊದಲು ಯಾರಿಗೂ ಗೊತ್ತಾಗಬಾರದು ಜೊತೆಗೆ ಪ್ರಶ್ನೆ ಪತ್ರಿಕೆ ಗುಣ ಮಟ್ಟದ್ದಾಗಿರಬೇಕು. ಈ ಷರತ್ತಿನೊಡನೆ ಆಯೋಗವು ಪರೀಕ್ಷೆ ನಡೆಸಬೇಕು. ಆದರೆ ಪದೇ ಪದೆ ಎಡವುತ್ತಿದೆ. ಲೋಕಸೇವಾ ಆಯೋಗಗಳ ಕುರಿತು ಸರ್ಕಾರಗಳು ನೇರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಇದು ಸಂವಿಧಾನಬದ್ಧವಾದ ಸಂಸ್ಥೆಯಾಗಿದೆ. ಲೋಕ ಸೇವಾ ಆಯೋಗಗಳು ಆರ್ಟಿಕಲ್ 315 ರಂತೆ ರಚನೆಯಾಗಿವೆ. ಲೋಕ ಸೇವಾ ಆಯೋಗಗಳ ಸದಸ್ಯರನ್ನು ತೆಗೆದು ಹಾಕಲು ಸುಪ್ರೀಂಕೋರ್ಟಿನ ಒಪ್ಪಿಗೆಯೊಂದಿಗೆ ರಾಷ್ಟ್ರಪತಿಗಳು ಆರ್ಟಿಕಲ್ 317 ರಂತೆ ತೆಗೆದು ಹಾಕಬೇಕು” ಎಂದು ಹೇಳಿದರು.

ಕೆ.ಪಿ.ಎಸ್.ಸಿ.ಯ ಸದಸ್ಯರ ಸಂಖ್ಯೆ ಏರಿಸಿದ್ದೇ ಬಿಜೆಪಿ

“ಆರ್. ಅಶೋಕ್ ಅವರು ಉತ್ತರ ಪ್ರದೇಶದಲ್ಲಿ 25 ಕೋಟಿ ಜನಸಂಖ್ಯೆ ಇರಬಹುದು, ಅಲ್ಲಿ ಕೇವಲ 8 ಜನ ಸದಸ್ಯರಿದ್ದಾರೆ. ಆದರೆ, ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯಲ್ಲಿ 16 ಜನ ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಕೆ.ಪಿ.ಎಸ್.ಸಿ.ಯ ಸದಸ್ಯರ ಸಂಖ್ಯೆ ಅಧ್ಯಕ್ಷರೂ ಸೇರಿದಂತೆ 14 ರಿಂದ 16 ಕ್ಕೆ ಏರಿಸಿದ್ದು ಬೊಮ್ಮಾಯಿಯವರ ಸರ್ಕಾರ. ಇರಲಿ ಈ ಕುರಿತೂ ಕೂಡ ನಾವು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ನಾವು ಕೆಪಿಎಸ್‌ಸಿ ಸಿಬ್ಬಂದಿಗಳ ನೇಮಕ, ವರ್ಗಾವಣೆ ಇತ್ಯಾದಿಗಳ ಕುರಿತಂತೆ ನಿಯಮಗಳಿಗೆ ಹಲವಾರು ತಿದ್ದುಪಡಿ ತರಲು ಉದ್ದೇಶಿಸಿದ್ದೇವೆ. ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments