Homeಕರ್ನಾಟಕ2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ, ಗ್ಯಾರಂಟಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ

2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ, ಗ್ಯಾರಂಟಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ

2028ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ. ಮಹಿಳೆಯರು ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೌಮ್ಯ ರೆಡ್ಡಿಯವರು ಪ್ರದೇಶ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

“ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆ ಮಾಡುವ ಸಮರ್ಥ್ಯ ಸೌಮ್ಯ ರೆಡ್ಡಿ ಅವರಿಗಿದೆ. ಈ ದಿಕ್ಕಿನಲ್ಲಿ ಅವರಿಗೆ ಎಲ್ಲರ ಸಹಕಾರ ಮುಖ್ಯ” ಎಂದರು.

“ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿ ಪಕ್ಷ ಬಿಜೆಪಿ. ಮುಖ್ಯವಾಗಿ ಬಿಜೆಪಿ ಮಹಿಳಾ ಮೀಸಲಾತಿಯ, ಮಹಿಳಾ ಹಕ್ಕುಗಳ ವಿರೋಧಿ. ಇದನ್ನು ಸಮಸ್ತ ಮಹಿಳೆಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಿ” ಎಂದು ಹೇಳಿದರು.

ಅತ್ತೆ ಸೊಸೆ ಜಗಳ, ಬಿಜೆಪಿ ಷಡ್ಯಂತ್ರ

“ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾಳಜಿ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಹೀಗಾಗಿ ಎಲ್ಲ ಜಾತಿ, ಧರ್ಮದ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದು ನಾವು. ಇದನ್ನು ವಿರೋಧಿಸಿದ್ದು ಬಿಜೆಪಿ. ರಾಜ್ಯದ ಒಂದು ಕೋಟಿ 21 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು ಆರ್ಥಿಕ ಶಕ್ತಿ ನೀಡುತ್ತಿರುವುದು ನಾವು. ಬಿಜೆಪಿಯವರು ಅತ್ತೆ ಸೊಸೆ ಜಗಳ ಆಡ್ತಾರೆ ಎನ್ನುವ ಸುಳ್ಳು ನೆಪ ಮುಂದಿಟ್ಟು ಮಹಿಳೆಯರ ಖಾತೆಗೆ ಹೋಗುವ ಹಣವನ್ನು ನಿಲ್ಲಿಸಲು ಷಡ್ಯಂತ್ರ ನಡೆಸಿತು” ಎಂದು ಟೀಕಿಸಿದರು.

“ಆದರೆ ಗೃಹಲಕ್ಷ್ಮಿ ಹಣದಲ್ಲಿ ಅತ್ತೆ ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ. 2028ರಲ್ಲೂ ನಾವೇ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುವುದನ್ನು ಮುಂದುವರೆಸುತ್ತೇವೆ” ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ , ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಪಕ್ಷದ ಕಾರ್ಯಾಧ್ಯಕ್ಷರುಗಳು, ಮಾಜಿ ಮಹಿಳಾ ಅಧ್ಯಕ್ಷರುಗಳು, ಶಾಸಕ ಹ್ಯಾರಿಸ್ ಮತ್ತಿತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments