ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭಕ್ಕೆ ಕಂದಾಯ ಇಲಾಖೆ ಹೊಸಪೇಟೆಯಲ್ಲಿ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ 1,11,111 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ. ಬಿಜೆಪಿ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ, ಜನರ ಎದುರು ಸುಳ್ಳು ಹೇಳಿಕೊಂಡು ತಿರುಗುತ್ತಿದೆ” ಎಂದು ಹರಿಹಾಯ್ದರು.
ಸರ್ವ ಜನಾಂಗದ ಶಾಂತಿಯ ತೋಟ
“ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆ” ಎಂದರು.
“ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕೇಂದ್ರ ಪ್ರಾಯೋಜಿತ ಯೋಜನೆಗಳಿಗೂ ಕೇಂದ್ರದಿಂದ ಪೂರ್ತಿ ಅನುದಾನ ಬಂದೇ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ರಾಜ್ಯದ ಪಾಲನ್ನು ಪೂರ್ತಿ ಕೊಟ್ಟಿದೆ. ಆದರೆ ಕೇಂದ್ರ ಸರ್ಕಾರ ತಮ್ನ ಪಾಲನ್ನು ಕೊಡದೆ ಉಳಿಸಿಕೊಂಡು ಅನ್ಯಾಯ ಮಾಡುತ್ತಿದೆ. 15 ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯ ನಿಮಗೆಲ್ಲಾ ಗೊತ್ತೇ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5300 ಕೋಟಿ ಹಣದಲ್ಲಿ ಬಿಡಿಗಾಸನ್ನೂ ಬಿಡುಗಡೆ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಭರವಸೆ ನೀಡಿದರು. ಇದನ್ನೂ ಈಡೇರಿಸಲಿಲ್ಲ” ಎಂದು ಟೀಕಿಸಿದರು.
ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ
“ಈಗ ಜೆಡಿಎಸ್ ಮತ್ತು ಬಿಜೆಪಿ ಕೂಡಿಕೊಂಡಿವೆ. ಆದರೆ ಬಿಜೆಪಿ ಇದುವರೆಗೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲೇ ಇಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದದ್ದು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಇವತ್ತಿನವರೆಗೂ ಜನರಿಂದ ಆಯ್ಕೆಯೇ ಆಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಇತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿದೆವು, ಅಧಿಕಾರಕ್ಕೆ ಬಂದ ಬಳಿಕ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚಿಸಿದೆವು. ಸಮಿತಿ ಕೊಟ್ಟಿರುವ ವರದಿಯಲ್ಲಿ ಕಮಿಷನ್ ವ್ಯವಹಾರ ಸಾಬೀತಾಗಿದೆ” ಎಂದರು.
“1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಕೊಡುತ್ತಿದ್ದೇವೆ. 1.30 ಕೋಟಿ ಕುಟುಂಬಗಳಿಗೆ ಗೃಹ ಜ್ಯೋತಿ ಯೋಜನೆಯಡಿ ಅನುಕೂಲ ಒದಗಿಸಿದ್ದೇವೆ. ಜೊತೆಗೆ ಇಡೀ ರಾಜ್ಯದ ಮಹಿಳೆಯ ರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ” ಎಂದು ಹೇಳಿದರು.
ಚಿನ್ನದ ಬೆಲೆ ಈಗ ಎಷ್ಟಿದೆ?
“ಚಿನ್ನದ ಬೆಲೆ ಈಗ ಲಕ್ಷ ಆಗಿದೆ. ಗ್ಯಾಸ್ ಬೆಲೆ 400 ಇದ್ದದ್ದು ಈಗ 850 ಆಗಿದೆ. ಡೀಸೆಲ್, ಪೆಟ್ರೋಲ್, ಎಣ್ಣೆ, ಕಾಳು, ಬೇಳೆ, ರಸಗೊಬ್ಬರ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿರುವ ಕೇಂದ್ರದ ಮೋದಿಯವರ ಸರ್ಕಾರದ ವಿರುದ್ಧ ಜನಾಕ್ರೋಶ ಇದೆಯೇ ಹೊರತು ನಮ್ಮ ಸರ್ಕಾರದ ಪರವಾಗಿ ಜನಾಭಿಪ್ರಾಯ ಇದೆ. ಹೀಗಾಗಿ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಕಾರ್ಯಕ್ರಮವೇ ನಕಲಿ” ಎಂದರು.
ಭೂ ಗ್ಯಾರಂಟಿ: ಡಿ ಕೆ ಶಿವಕುಮಾರ್
“ನಮಗೆ ಅಧಿಕಾರ ನೀಡಿ ರಾಜ್ಯದ ಸೇವೆ ಮಾಡಲು ಆಶೀರ್ವಾದ ಮಾಡಿದ ಜನರ ಋಣ ತೀರಿಸಲು ನಮ್ಮ ಸರ್ಕಾರ ಆರನೆಯದಾಗಿ ಭೂ ಗ್ಯಾರಂಟಿ ಯೋಜನೆ ನೀಡುತ್ತಿದೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
“ನಾವಿಂದು ಎರಡು ವರ್ಷಗಳ ಸಂಭ್ರಮಾಚರಣೆ ಮಾಡಲು ಇಲ್ಲಿಗೆ ಬಂದಿಲ್ಲ. ಕರ್ನಾಟಕ ರಾಜ್ಯದ ಜನರ ಋಣ ತೀರಿಸಲು ಸಮರ್ಪಣೆಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 136 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡಿ ನಮಗೆ ಆಶೀರ್ವಾದ ಮಾಡಿದಿರಿ. ನಿಮ್ಮ ಋಣ ತೀರಿಸಲು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡುವ ಮೂಲಕ ನಮ್ಮ ಸರ್ಕಾರ ಇತಿಹಾಸ ಬರೆಯುತ್ತಿದೆ” ಎಂದು ಹೇಳಿದರು.