Homeಕರ್ನಾಟಕತಮಿಳುನಾಡಿಗೆ ನೀರು ಹರಿಸಿ, ನೀರಗಂಟಿ ಕೆಲಸ ಮಾಡುತ್ತಿದ್ದೇವೆ: ಕುಮಾರಸ್ವಾಮಿ ಕಿಡಿ

ತಮಿಳುನಾಡಿಗೆ ನೀರು ಹರಿಸಿ, ನೀರಗಂಟಿ ಕೆಲಸ ಮಾಡುತ್ತಿದ್ದೇವೆ: ಕುಮಾರಸ್ವಾಮಿ ಕಿಡಿ

ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾರ್ಯಗಾರ, ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೀಗಿದೆ. ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ” ಎಂದರು.

“ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ” ಎಂದು ಟೀಕಿಸಿದರು.

“ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ದಟ್ಟಣೆಯಿಂದ ಮುಂದೆ ಇಡೀ ಕನ್ನಂಬಾಡಿ ಕಟ್ಟೆಯ ನೀರೆಲ್ಲವನ್ನು ಕೊಟ್ಟರೂ ರಾಜಧಾನಿಗೆ ಕುಡಿಯುವ ನೀರು ಸಾಕಾಗದ ಪರಿಸ್ಥಿತಿ ಬರಬಹುದೇನೋ? ಮುಂದೆ ಈ ರೀತಿಯ ನೀರಿನ ಸಂಕಷ್ಟ ಬರುತ್ತದೆ ಎನ್ನುವ ದೂರದೃಷ್ಟಿಯಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ. ಮಂಡ್ಯದಲ್ಲಿ ಗೆಲ್ಲಿಸಿದರೆ ಐದು ನಿಮಿಷದಲ್ಲಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ಮಾಡಬೇಕಾದ ಕೆಲಸ ಒಂದಿದೆ, ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ” ಎಂದು ಹೇಳಿದರು.

“ಸಂಸತ್ ನಲ್ಲಿ ಕಾವೇರಿ ವಿಷಯ ಪ್ರಸ್ತಾಪ ಆದಾಗ ನಾನು ನೋಡುತ್ತಿದ್ದೇನೆ. ಆ ನದಿಯ ವಿಷಯ ಪ್ರಸ್ತಾಪವಾದರೆ ತಮಿಳುನಾಡಿನ ಎಲ್ಲಾ ಸಂಸದರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿಬಿಡುತ್ತಾರೆ. ಆದರೆ, ನಮ್ಮಲ್ಲಿ ಏನಾಗುತ್ತಿದೆ? ಎಲ್ಲಕ್ಕೂ ರಾಜಕೀಯ ತರುತ್ತೇವೆ, ಜಾತಿ ತರುತ್ತೇವೆ. ಇದೇ ನಮಗೆ ಮುಳುವಾಗಿದೆ” ಎಂದರು.

ಕರ್ನಾಟಕದ ಮುಖ್ಯಮಂತ್ರಿ ಒಬ್ಬರು ಬಹಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಂದಿನ ಮದರಾಸಿಗೆ (ಇಂದಿನ ಚೆನ್ನೈ) ಹೋಗುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಅಂದಿನ ನಮ್ಮ ಮುಖ್ಯಮಂತ್ರಿಗಳು ಕಾಮರಾಜ್ ಅವರನ್ನು ಉದ್ದೇಶಿಸಿ, “ನಾವು ನಿಮಗೆ ಎಷ್ಟು ಬೇಕಾದರೂ ಕಾವೇರಿ ನೀರು ಬಿಡುತ್ತೇವೆ. ನೀವು ನಮಗೆ ಭತ್ತ ಬೆಳೆದುಕೊಡಿ ಸಾಕು..” ಎಂದು ಹೇಳಿದ್ದರಂತೆ. ಇದು ನಮ್ಮ ರಾಜ್ಯದ ಉದಾರತೆಗೆ ಪ್ರತೀಕ. ಇದೇ ಇವತ್ತು ನಮಗೆ ಮುಳುವಾಗುತ್ತಿದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಆದಿಚುಂಚನಗಿರಿಯ ನಿರ್ಮಲಾನಂದ ನಾಥ ಶ್ರೀ, ಸೌಮ್ಯನಾಥ ಸ್ವಾಮೀಜಿ, ಸಿದ್ಧರಾಮೇಶ್ವರ ಸ್ವಾಮೀಜಿ, ನಿಶ್ಚಲಾನಂದನಂದ ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಪಕ್ಷ ನಾಯಕ ಆರ್. ಅಶೋಕ್, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡರು, ಸಂಸದ ಡಾ. ಸಿ ಎನ್ ಮಂಜುನಾಥ್, ಮಾಜಿ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಕಾವೇರಿ ನದಿ ರಕ್ಷಣಾ ಸಮಿತಿ ಅಧ್ಯಕ್ಷ ಹೆಚ್.ಕೆ. ರಾಮು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments