ವಿಜಯಪುರ, ಕಲಬುರಗಿ, ಮಂಡ್ಯ ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿವಾದ ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಉಪಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ವಕ್ಫ್ ವಿಚಾರವಾಗಿ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಎರಡು ಕೋಮಿನ ನಡುವೆ ಬುಧವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.
ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ.
ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಮನೆ ಮುಂದಿದ್ದ ಬೈಕ್ ಅನ್ನು ಜಖಂಗೊಳಿಸಲಾಗಿದೆ.
ಕಲ್ಲು ತೂರಾಟ ಹಾಗೂ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ, ರಾತ್ರೋರಾತ್ರಿ ಹಾವೇರಿ ಡಿಸಿ, ಎಸ್ಪಿ, ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ, ಎಸ್ಪಿ ಅಂಶುಕುಮಾರ್ ಕಡಕೋಳ ಗ್ರಾಮಕ್ಕೆ ದೌಡಾಯಿಸಿದ್ದಾರೆ.
“ಕಡಕೋಳ ಗ್ರಾಮದಲ್ಲಾದ ಗಲಾಟೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕರು ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿದೆ” ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಬಿಗಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿದ್ದ ಗರಡಿ ಮನೆ ಹಾಗೂ ಹಲವು ಮನೆಗಳ ಖಾತೆ ಬದಲಾವಣೆ ಮಾಡಿ ವಕ್ಸ್ ಆಸ್ತಿ ಎಂಬುದಾಗಿ ನಮೂದಿಸಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸುತ್ತಿದ್ದಾರೆ.