ಕರ್ನಾಟಕದಲ್ಲಿ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಪರಿಶೀಲನೆಗಾಗಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಗುರುವಾರ ರಾಜ್ಯಕ್ಕೆ ಆಗಮಿಸಿದ್ದಾರೆ.
ರಾಜ್ಯದ ಹಲವೆಡೆ ವಕ್ಸ್ ನೋಟಿಸ್ ಸೃಷ್ಟಿಸಿರುವ ಆತಂಕದ ಬಗ್ಗೆ ಗಮನ ಸೆಳೆದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಕ್ಸ್(ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಇಂದು ರಾಜ್ಯಕ್ಕೆ ಆಗಮಿಸಿರುವ ಅವರು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಗುರುವಾರ ಬಳಿಗ್ಗೆ ಹುಬ್ಬಳ್ಳಿಗೆ ಬಂದ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ರಾಜ್ಯದ ರೈತರ ಸಮಸ್ಯೆಗಳನ್ನು ಆಲಿಸುವುದಕ್ಕೆಂದೇ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ರೈತರು ದಶಕಗಳ ಕಾಲ ಉಳಿಮೆ ಮಾಡಿದ ಜಮೀನುಗಳನ್ನು ವಕ್ಫ್ ಬೋರ್ಡ್ ಏಕಾಏಕಿ ತನ್ನದೆಂದು ಹೇಳುತ್ತಿದೆ. ರೈತರು ತಮ್ಮ ಆಸ್ತಿ ಪತ್ರದ ವಿವರಗಳನ್ನು ತಂದಿದ್ದಾರೆ. ರೈತರ ಹೆಸರಲ್ಲಿರುವ ಭೂ ದಾಖಲೆ ವಿವರ ನೀಡುತ್ತಿದ್ದಾರೆ. ರೈತರ ಅಹವಾಲು ಸ್ವೀಕರಿಸುತ್ತೇನೆ” ಎಂದರು.
“ಕಳೆದ 60-70 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿ ಮೇಲೆ ವಕ್ಫ್ ಬೋರ್ಡ ಹಕ್ಕು ಸಾಧಿಸಲು ಹೊರಟಿದೆ. ಹೀಗಾಗಿ ರೈತರು ಪ್ರತಿಭಟಿಸುತ್ತಿದ್ದಾರೆ. ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿಜಯಪುರ ಜಿಲ್ಲೆಗೂ ಭೇಟಿ ನೀಡುತ್ತಿದ್ದೇನೆ. ಕೇವಲ ರೈತರ ಕೃಷಿ ಭೂಮಿ ಮಾತ್ರವಲ್ಲ, ಪ್ರಾಚ್ಯವಸ್ತು ಇಲಾಖೆಯ ಪಾರಂಪರಿಕ ತಾಣಗಳನ್ನು ಸಹ ವಕ್ಫ್ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಸಹ ಮಾಹಿತಿ ಪಡೆಯಲಿದ್ದೇನೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸತ್ಯಾಸತ್ಯತೆ ತಿಳಿದು ವರದಿ ನೀಡುತ್ತೇನೆ” ಎಂದು ಹೇಳಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಅಹವಾಲು ಸ್ವೀಕಾರ ನಡೆಯಲಿದೆ. ಮನವಿ ಸ್ವೀಕಾರ ಮಾಡಿ ರೈತರ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ.
ಬೊಮ್ಮಾಯಿ ನಿಯೋಗ ಮನವಿ
ವಕ್ಪ್ ಕಾಯ್ದೆ ತಿದ್ದುಪಡಿ ಕುರಿತು ನೇಮಕವಾಗಿರುವ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಪ್ರತಿಪಕ್ಚದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.