ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5, ಮಂಗಳವಾರ) ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಸೋಮವಾರ ಕೊನೆಯ ದಿನ ಬಿರುಸಿನ ಪ್ರಚಾರದಲ್ಲಿ ಭಾಗಿಯಾದರು. ಈಗಾಗಲೇ 7.8 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ‘ಮೇಲ್-ಇನ್’ ಮೂಲಕ ಮತ ಚಲಾಯಿಸಿದ್ದಾರೆ ಎಂದು ಯುನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ತಿಳಿಸಿದೆ.
ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಎಲ್ಲ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ನವೆಂಬರ್ನ ಮೊದಲ ಮಂಗಳವಾರದ ದಿನ ಆಯ್ಕೆ ಮಾಡಲಾಗಿದೆ. ಈ ಕಾನೂನನ್ನು 1845ರಲ್ಲಿ ಜಾರಿಗೊಳಿಸಲಾಯಿತು. 180 ವರ್ಷಗಳ ಹಿಂದೆ ಅಮೆರಿಕ ಬಹುತೇಕ ಕೃಷಿ ಪ್ರಧಾನ ರಾಷ್ಟ್ರವಾಗಿತ್ತು. ನವೆಂಬರ್ ಆರಂಭದ ದಿನಗಳಲ್ಲಿ ರೈತರಿಗೆ ಕೃಷಿ ಕೆಲಸಗಳೇ ಹೆಚ್ಚಿರುತ್ತಿದ್ದವು. ಬಹುತೇಕ ಕ್ರಿಶ್ಚಿಯನ್ನರು ಭಾನುವಾರದಂದು ಚರ್ಚ್ಗೆ ಹೋಗುತ್ತಿದ್ದರು. ಉಳಿದ ದಿನ ಮಾರಾಟ, ಖರೀದಿ ಸೇರಿದಂತೆ ಹಲವು ಕೆಲಸಗಳಿರುತ್ತಿದ್ದವು. ಆ ಕಾರಣದಿಂದ ಮಂಗಳವಾರವನ್ನು ನಿಗದಿಪಡಿಸಲಾಗಿದೆ.
ಇಲ್ಲಿ 50 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 538 ಎಲೆಕ್ಟರ್ಸ್ ಚುನಾಯಿತರಾಗುತ್ತಾರೆ. ಪ್ರತಿ ರಾಜ್ಯದಿಂದ ಆಯ್ಕೆಯಾದ ಎಲೆಕ್ಟರ್ಸ್ ಸಂಖ್ಯೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಅಧಿಕಾರ ಲಭಿಸುತ್ತದೆ. 54 ಸ್ಥಾನಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಜನಸಂಖ್ಯಾ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದವರು ಸಂಪೂರ್ಣ 54 ಸ್ಥಾನಗಳಲ್ಲೂ ವಿಜಯಿಶಾಲಿಗಳಾಗಲಿದ್ದಾರೆ.
ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ. ನವೆಂಬರ್ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್ ಡಿಸೆಂಬರ್ನ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ. ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ವಾಷಿಂಗ್ಟನ್ ಡಿಸಿಗೆ ಕಳುಹಿಸಲಾಗುತ್ತದೆ.
ಮತದಾರರಿಗೆ 10 ಲಕ್ಷ ಉಡುಗೊರೆ
ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್‌ಲೈನ್ ಅರ್ಜಿಗೆ ಸಹಿ ಹಾಕುವವರಿಗೆ ಪ್ರತಿದಿನ ₹10 ಲಕ್ಷ ಉಡುಗೊರೆ ನೀಡುವ ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಅವರ ಪ್ರಸ್ತಾವಕ್ಕೆ ಪೆನ್ಸಿಲ್ವೇನಿಯಾ ನ್ಯಾಯಾಧೀಶರು ಸಮ್ಮತಿ ಸೂಚಿಸಿದ್ದಾರೆ. ಫಿಲಡೆಲ್ಸಿಯಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಏಂಜೆಲೊ ಫೋಗ್ಲಿಯೆಟ್ಟಾ ಅವರು ಆದೇಶ ಪ್ರಕಟಿಸಿದ್ದಾರೆ. ಮಸ್ಕ್ ಅವರ ಮನವಿಗೆ ಸ್ಪಂದಿಸಿ ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್‌ಲೈನ್ ಅರ್ಜಿಗೆ ಸಹಿ ಹಾಕಿದವರು ಮತ್ತು ಉಡುಗೊರೆಗೆ ಅರ್ಹತೆ ಪಡೆದವರ ಹೆಸರುಗಳನ್ನು ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ನ.5ರಂದು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.