ಮೋದಿ ಮೋಡಿಗೆ ಮರುಳಾಗಿ ಮತ ಹಾಕಿ ನಾವು ಸೆಕೆಂಡ್ ಸ್ಟೇಜ್ ಕ್ಯಾನ್ಸರ್‌ನಲ್ಲಿದ್ದೇವೆ, ಜನರು ಮೂರನೇ ಬಾರಿ ವೋಟ್ ಹಾಕೋ ಸಾಹಸ ಮಾಡಲ್ಲ ಎಂದು ಮಾರ್ಮಿಕವಾಗಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್ ಹೇಳಿದರು.
ಲೋಕಸಭೆ ಚುನಾವಣೆಗೆ ಮುಳಬಾಗಲು ತಾಲೂಕಿನ ಕುರುಡುಮಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ಬಿಜೆಪಿ ಅವಧಿಯ 10 ವರ್ಷದಲ್ಲಿ ದೇಶ ಯಾವುದೇ ಅಭಿವೃದ್ಧಿ ಸಾಧಿಸಿಲ್ಲ. ಮತ್ತೆ 3ನೇ ಬಾರಿಯೂ ಬಿಜೆಪಿಗೆ ಮತ ಹಾಕುವ ಸಾಹಸಕ್ಕೆ ಜನ ಕೈಹಾಕುವುದಿಲ್ಲ. ಈಗಲೇ ನಾವು ಸೆಕೆಂಡ್ ಸ್ಟೇಜ್ ಕ್ಯಾನ್ಸರ್ ನಲ್ಲಿದ್ದೇವೆ. 3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಥೆ ಮುಗೀತು” ಎಂದರು.
“ಯಾರಿಗೂ ಒಂದು ರೂಪಾಯಿ ದುಡ್ಡು ಬಂದಿಲ್ಲ. ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಕರೋನಾ ಸಮಯದಲ್ಲಿ ರಾಜ್ಯದ ಬಿಜೆಪಿ ಶಾಸಕರು ಯಾವ ರೀತಿ ದುಡ್ಡು ಹೊಡೆದಿದ್ದಾರೆ ಅಂತ ಗೊತ್ತಿದೆ. ಜನ ರಸ್ತೆಗಳಲ್ಲಿ ಸಾಯ್ತಾ ಇದ್ರು, ಆ್ಯಂಬುಲೆನ್ಸ್ ಗಳು ಇರಲಿಲ್ಲ. ಆಕ್ಸಿಜನ್ ಇಲ್ಲ ಅಂತೇಳಿ ಹಣವನ್ನು ದೇಣಿಗೆ ಪಡೆದರು. ಈ ಹಣವನ್ನೂ ಆರ್‌ಟಿಐ ವ್ಯಾಪ್ತಿಗೆ ಬರಲ್ಲ ಅಂತೇಳಿ ಮುಚ್ಚಿಡುವ ಕೆಲಸ ಮಾಡಿದ್ದಾರೆ” ಎಂದು ಕಿಡಿಕಾರಿದರು.
“ಬಿಜೆಪಿಯವರು ವಿರೋಧ ಪಕ್ಷದ ನಾಯಕರನ್ನು ಸುಖಾ ಸುಮ್ಮನೆ ಜೈಲಿಗೆ ಹಾಕುತ್ತಿದ್ದಾರೆ. ಏನೇ ಅನ್ಯಾಯವಾದರೂ ಯಾರೂ ಮಾತನಾಡಬಾರದು ಅನ್ನುವ ರೀತಿ ಮಾಡಿದ್ದಾರೆ. ಏನಾದರೂ ಮಾತಾಡಿದರೆ ಜೈಲಿಗೆ ಹಾಕುತ್ತಾರೆ, ಇಲ್ಲ ಕೊಂಡುಕೊಂಡು ಬಿಡುತ್ತಾರೆ” ಎಂದು ಹರಿಹಾಯ್ದರು.
ಕೋಲಾರ ಅಭಿವೃದ್ಧಿ ಸಾಧಿಸಿಲ್ಲ
“ಕೋಲಾರ ಜಿಲ್ಲೆ ತುಂಬಾ ಅಭಿವೃದ್ಧಿಯಾಗಬೇಕಿದೆ. ಕೆ ಎಚ್ ಮುನಿಯಪ್ಪ ಅವರ ಅವಧಿಯಲ್ಲಿ ಹೈವೆ ರಸ್ತೆಗಳಾಗಿದ್ದವು. ನಂತರ ಮುನಿಸ್ವಾಮಿ ಬಂದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೋಲಾರ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಕೋಲಾರ ಅಭಿವೃದ್ಧಿ ಮಾಡಲು ನನಗೆ ಈ ಬಾರಿ ಅವಕಾಶ ಸಿಕ್ಕಿದೆ. ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ಜಿಲ್ಲೆ ಕೋಲಾರ. ನಾನು ಸಿವಿಲ್ ಇಂಜಿನಿಯರಿಂಗ್ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ನನ್ನದೇ ಆದ ಕನಸುಗಳಿವೆ” ಎಂದರು.
ಬಣ ಜಗಳ ಇಲ್ಲ
ಅಭ್ಯರ್ಥಿ ವಿಚಾರದಲ್ಲಿ ನಮ್ಮ ಪಕ್ಷದ ಎರಡು ಬಣಗಳ ನಡುವೆ ಕಿತ್ತಾಟ ಇತ್ತು. ಆದರೆ, ನನ್ನ ವಿಚಾರದಲ್ಲಿ ಅವರಿಗೆ ಯಾವುದೇ ವೈಮನಸ್ಸು ಇಲ್ಲ. ನಮ್ಮ ಎರಡೂ ಬಣದ ನಾಯಕರ ಜೊತೆ ಮಾತನಾಡಿದ್ದೇನೆ. ನನ್ನನ್ನು ಎರಡೂ ಬಣದ ನಾಯಕರು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.
“ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನಗೆ ಹೈಕಮಾಂಡ್ ಹೇಳಿದೆ. ನೀನು ಅಭ್ಯರ್ಥಿಯಾದರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಆ ಪ್ರಕಾರ ಎರಡೂ ಬಣದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದರು.
ಹೊರಗಿನವರು ಮತ್ತು ಸ್ಥಳೀಯರು ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ ವಿ ಗೌತಮ್, “ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಗೆ ಚುನಾವಣೆಗೋಸ್ಕರ ಎಲ್ಲರೂ ಬಂದಿರೋರೆ. ನನಗೂ ಕೋಲಾರ ಹೊಸದಲ್ಲ. ಬೆಂಗಳೂರಿನಲ್ಲಿ ಕೋಲಾರದವರೇ ಶೇ.75 ಜನ ಇದ್ದಾರೆ. ಮತದಾರರ ಮುಂದೆ ಹೋಗಿ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆಗಳ ಶ್ರೀರಕ್ಷೆಯೇ ನಮಗೆ ಆಶೀರ್ವಾದ” ಎಂದರು.