ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ SLP 1390/2009 ರಲ್ಲಿನ ಆದೇಶದ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ದಾಖಲಿಸುವ ಕುರಿತಾಗಿ ಬುಧವಾರ ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಯಿತು.
ಈ ಸಂದರ್ಭದಲ್ಲಿ PTCL ಕಾಯ್ದೆಗೆ ವ್ಯತಿರಿಕ್ತವಾಗಿ ಇರುವ ಅಂಶಗಳನ್ನು ಕಾನೂನಾತ್ಮಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಪಿಟಿಸಿಎಲ್ ಕಾಯ್ದೆ ಮತ್ತು ಪರಿಶಿಷ್ಟರ ಭೂಮಿಯ ಮೇಲಿನ ಹಕ್ಕುಗಳ ಕುರಿತ ಹೋರಾಟವು ಸುದೀರ್ಘವಾಗಿ ಇದ್ದು ಅವರ ಭೂಮಿಯ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಹೆಚ್ಚು ಅರ್ಥಪೂರ್ಣವೂ ಆಗಿದೆ. ಭೂಮಿಯ ಹಕ್ಕು ಎಂದರೆ, ಬದುಕಿನ ಮತ್ತು ವೈಯಕ್ತಿಕ ಘನತೆಯ ಸೂಚಕವಾಗಿದ್ದು ಈ ಭೂಮಿಯನ್ನು ನೀಡಲು ಮತ್ತು ಇರುವ ಭೂಮಿಯ ಸುತ್ತ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ದೂರದೃಷ್ಟಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕ್ರಮ ವಹಿಸಿದ್ದು, ಇದು ಸರ್ಕಾರದ ಬದ್ಧತೆಯಾಗಿದೆ ಎಂದು ಸಚಿವ ಎಚ್ ಸಿ ಮಹದೇವಪ್ಪ ತಿಳಿಸಿದರು.
ಇನ್ನು ಪಿಟಿಸಿಎಲ್ ಕಾಯ್ದೆ ಮತ್ತು ಪರಿಶಿಷ್ಟ ಸಮುದಾಯಗಳ ಭೂಮಿಯ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ದಲಿತ ಸಂಘಟನೆಗಳು ಮತ್ತು ಹೋರಾಟದ ಮಿತ್ರರೊಡನೆ ಪೂರಕ ಸಭೆಯನ್ನು ನಡೆಸಲಾಗಿದ್ದು ಅವರ ಬೇಡಿಕೆಗಳ ಜೊತೆಗೆ, ಪರಿಶಿಷ್ಟ ಸಮುದಾಯಗಳ ಭೂಮಿಯ ಹಕ್ಕುಗಳಿಗೆ ತೊಂದರೆ ಆಗದಂತೆ ದೂದೃಷ್ಟಿಯ ನೆಲೆಯಲ್ಲಿ ಸರ್ಕಾರವು PTCL ಕಾಯ್ದೆಯನ್ನು ನಿರ್ವಹಿಸಲಿದ್ದು ಈ ನಿಟ್ಟಿನಲ್ಲಿ ಸರ್ಕಾರವು ಪರಿಶಿಷ್ಟರಿಗೆ ಶಾಶ್ವತವಾದ ಪರಿಹಾರಗಳನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಸಚಿವರು ಸಭೆಯಲ್ಲಿ ತಿಳಿಸಿದ್ದಾರೆ
ಈ ಮಹತ್ವದ ಸಭೆಯಲ್ಲಿ ಕಂದಾಯ ಇಲಾಖೆ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಈ ವೇಳೆ ಉಪಸ್ಥಿತರಿದ್ದರು.