ಜನರ ಕಣ್ಣು, ದೃಷ್ಟಿಗೆ ತೊಂದರೆ ಬಂದರೆ ಚಿಕಿತ್ಸೆ ನೀಡುವ ʼದೃಷ್ಟಿ ಗ್ಯಾರಂಟಿʼಯನ್ನು ಆಶಾಕಿರಣ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಗೋವಿಂದರಾಜನಗರದ ಎಂ.ಸಿ ಲೇಔಟ್ ನಲ್ಲಿ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ʼಆಶಾಕಿರಣ ದೃಷ್ಟಿ ಕೇಂದ್ರʼವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಯೋಜನೆಯ ಲಾಭ ಪಡೆದವರಿಗೆ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದರು.
“ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗುತ್ತಿದೆ. ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಕನ್ನಡಕ ಸೇರಿದಂತೆ ಚಿಕಿತ್ಸೆಯ ಸಾವಿರಾರು ಮೊತ್ತ ಹಣ ಉಳಿಯುತ್ತದೆ. ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಇವರು ಆರೋಗ್ಯ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ಕ್ರಾಂತಿಕಾರಕ ಹಾಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ” ಎಂದು ತಿಳಿಸಿದರು.
“ಹಿಂದಿನಿಂದಲು ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಅತ್ಯಂತ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕವಿದ್ದು. ಇಲ್ಲಿ ಕಲಿತವರು ಹೊರ ದೇಶಗಳಿಗೆ ತೆರಳಿ ದೇಶಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ” ಎಂದು ಹೇಳಿದರು.
“ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ʼಯಶಸ್ವಿನಿʼ ಯೋಜನೆ ಮೂಲಕ ರೈತರ, ಬಡವರ ಆರೋಗ್ಯ ಕಾಳಜಿಗೆ ಮುನ್ನುಡಿ ಬರೆದಿದ್ದು ನಮ್ಮ ಸರ್ಕಾರ. ಇದನ್ನು ನೋಡಿದ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಗಳನ್ನು ಪ್ರಾರಂಭ ಮಾಡಿತು. ನಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಗ್ಯಾರಂಟಿ ಸರ್ಕಾರ. ಐದು ಗ್ಯಾರಂಟಿಗಳ ಜೊತೆಗೆ ಭೂಮಿ ಗ್ಯಾರಂಟಿಯನ್ನು ಸರ್ಕಾರಕ್ಕೆ ಎರಡು ವರ್ಷ ತುಂಬಿದ ಘಳಿಗೆಯಲ್ಲಿ ನಮ್ಮ ಜನತೆಗೆ ನೀಡಿದ್ದೇವೆ” ಎಂದರು.
ಶೇ.25ರಷ್ಟು ಶುಲ್ಕ ಪಡೆದು ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ
“ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಬೇಕು ಎಂದು ಕ್ಷೇತ್ರದ ಶಾಸಕರಾ ಪ್ರಿಯಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಭಾಗಗಳನ್ನು ಈ ಆಸ್ಪತ್ರೆಯಲ್ಲಿ ತೆರೆದು ಜನಸೇವೆ ಮಾಡಲಾಗುತ್ತಿದೆ. ಮಾರುಕಟ್ಟೆ ದರದ ಶೇ.25 ರಷ್ಟು ಮಾತ್ರ ಹಣ ತೆಗೆದುಕೊಂಡು. ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ ನೀಡುವ ಆಲೋಚನೆಯೂ ಇದೆ” ಎಂದು ಹೇಳಿದರು.
“ರಾಜ್ಯದ ಜನಸಂಖ್ಯೆ 7 ಕೋಟಿಯಿದೆ. 2421 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಣೆ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಕವು ಇದಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು ಆರ್ಯುವೇದ ಆಸ್ಪತ್ರೆಗೆ ಹೊಸರೂಪ ನೀಡಲು ಸಚಿವರ ಜೊತೆ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.
ರವಿಕುಮಾರ್ ವಿರುದ್ದ ಕಿಡಿ
ಕಾರ್ಯಕ್ರಮದ ನಂತರ ಮಾಧ್ಯಮಗಳು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಅವಹೇಳನ ಮಾಡಿರುವ ರವಿಕುಮಾರ್ ವಿರುದ್ದ ದೂರು ದಾಖಲಾಗಿರುವ ಬಗ್ಗೆ ಕೇಳಿದಾಗ, “ಕಾನೂನು ಎಲ್ಲರಿಗೂ ಒಂದೇ. ನಿನಗೂ (ಮಾಧ್ಯಮ ಪ್ರತಿನಿಧಿ) ಯಾರ ಮಾತಿನಿಂದ ನೋವಾಗಿದ್ದರೂ, ಅವಾಚ್ಯ ಶಬ್ದ ಬಳಸಿದ್ದರೆ, ನಿನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕೆಲಸ ಯಾರೇ ಮಾಡಿದ್ದರೂ ರಕ್ಷಣೆ ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ” ಎಂದರು.
ಸಚಿವ ಎಂ.ಬಿ.ಪಾಟೀಲ್ ಅವರ ಭೇಟಿಯ ಬಗ್ಗೆ ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷ, ಡಿಸಿಎಂ ನನ್ನನ್ನು ಪ್ರತಿದಿನ ಅರ್ಧ ಡಜನ್ ಗೂ ಹೆಚ್ಚಿನ ಜನರು ಭೇಟಿ ಮಾಡುತ್ತಾ ಇರುತ್ತಾರೆ. ನಾನು ಮಾತನಾಡಿದ್ದನ್ನೆಲ್ಲಾ ನಿಮಗೆ ಹೇಳಲು ಆಗುತ್ತದೆಯೇ? ಕುಟುಂಬದವರು, ಸ್ನೇಹಿತರ ಬಳಿ ಮಾತನಾಡುತ್ತಾ ಇರುತ್ತೇವೆ ಅದನ್ನೆಲ್ಲಾ ನಿಮಗೆ (ಮಾಧ್ಯಮಗಳಿಗೆ) ಹೇಳಲು ಆಗುತ್ತದೆಯೇ? ನೂರಾರು ವಿಚಾರ ಚರ್ಚೆ ಮಾಡುತ್ತೇವೆ” ಎಂದರು.
ಎಎಸ್ ಪಿ ಭರಮನಿ ಅವರು ಸ್ವಾಭಿಮಾನಕ್ಕೆ ಧಕ್ಕೆಯಾಗಿ ಸ್ವಯಂನಿವೃತ್ತಿ ತೆಗೆದುಕೊಳ್ಳುತ್ತಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮಾಹಿತಿಯಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ” ಎಂದರು.