ಬೆದರಿಕೆ ಹಾಗೂ ಸುಲಿಗೆಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತರನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು’ ಎಂದು ಹೇಳಿ ವೈರಲ್ ಆಗಿ, ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪ ದಿವ್ಯಾ ವಸಂತ ಮೇಲಿದ್ದು, ಕೇರಳದಲ್ಲಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.
ಒಂದು ವಾರದಿಂದ ಪತ್ತೆಯಾಗಿ ತಮಿಳುನಾಡಿನಿಂದ ಕೇರಳಕ್ಕೆ ಬಂದು ಮರೆಸಿಕೊಂಡಿದ್ದ ದಿವ್ಯಾರನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸಿ ಠಾಣೆಗೆ ಕರೆತಂದು ಜೀವನ್ ಭೀಮಾನಗರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದರು. ರಾಜ್‌ನ್ಯೂಸ್ ಸುದ್ದಿವಾಹಿನಿ ಮಾಜಿ ಸಿಇಒ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು.