Homeಕರ್ನಾಟಕಕಾಂಗ್ರೆಸ್ ಸರ್ಕಾರದಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಆರ್‌ ಅಶೋಕ್‌

ಕಾಂಗ್ರೆಸ್ ಸರ್ಕಾರದಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಆರ್‌ ಅಶೋಕ್‌

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರದ ಖರ್ಚಿನಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವುದಾಗಲಿ, ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡುವುದಾಗಲಿ, ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಫೋಟೋ ಬಳಸುವುದಾಗಲಿ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂಬ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲವೇ ಎಂದು ವಿಪಕ್ಷ ಆರ್‌ ಅಶೋಕ್‌ ಪ್ರಶ್ನಿಸಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಘೋಷಣೆಯಾದ ಮರುಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆಯೂ ಜಾರಿಗೆ ಬಂದಿದೆ. ಈ ಕುರಿತು ಕೇಂದ್ರ ಚುನಾವಣಾ ಆಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನೂ ತಲುಪಿಸಿದೆ” ಎಂದಿದ್ದಾರೆ.

“ವಾಲ್ಮೀಕಿ ಜಯಂತಿಯ ಪ್ರಯುಕ್ತ ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸರ್ಕಾರಿ ಜಾಹೀರಾತಿನಲ್ಲಿ ಸರ್ಕಾರದ ಸಾಧನೆಗಳು ಅಂತ ಹೇಳಿಕೊಂಡಿರುವ ಜೊತೆಗೆ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಗಳ ಫೋಟೋ ಸಹ ಬಳಸಲಾಗಿದೆ. ಒಂದು ವೇಳೆ ವಾಲ್ಮೀಕಿ ಜಯಂತಿಗೆ ಶುಭಾಶಯ ಕೋರುವ ಉದ್ದೇಶ ಮಾತ್ರ ಇದಿದ್ದರೆ, ಸರ್ಕಾರದ ಸಾಧನೆಗಳು ಹಾಗು ಸಿಎಂ ಮತ್ತು ಡಿಸಿಎಂ ಭಾವಚಿತ್ರ ಇಲ್ಲದೆ ಕೇವಲ ಶುಭಾಶಯ ಕೋರುವ ಜಾಹಿರಾತು ಪ್ರಕಟಿಸಬಹುದಿತ್ತು. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿಯೇ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ” ಎಂದಿದ್ದಾರೆ.

“ಮಾದರಿ ನೀತಿ ಸಂಹಿತೆಯ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ಸರ್ಕಾರಿ ಖರ್ಚಿನಲ್ಲಿ ಇಂದು ಪ್ರಕಟವಾಗಿರುವ ಜಾಹೀತರಾತನ್ನ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ರಾಜ್ಯ ಸರ್ಕಾರದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ” ಎಂದು ಒತ್ತಾಯಿಸಿದ್ದಾರೆ.

ಸಿ.ಟಿ.ರವಿ ಆಕ್ಷೇಪ

ಕಾಂಗ್ರೆಸ್ಸಿನವರು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು.

ಬೆಂಗಳುರು ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಜಾಹೀರಾತು ಕೊಟ್ಟು ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿಗಳು, ಅವರ ಸಂಪುಟದ ಸಚಿವರ ನೀತಿ ಸಂವಿಧಾನಬಾಹಿರ. ಆದ್ದರಿಂದ ಚುನಾವಣಾ ಆಯೋಗವು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ರಾಜ್ಯದಲ್ಲಿ 3 ಉಪ ಚುನಾವಣೆಗಳು ನಡೆಯುತ್ತಿವೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ಅವರಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣಗಳಿಂದ ಪಾರಾಗುವ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದರಿಂದ ರಕ್ಷಣೆ ಪಡೆಯಲು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರಾಯಚೂರು ವಿಶ್ವವಿದ್ಯಾಲಯಕ್ಕೆ ನಾವು ಮಹರ್ಷಿ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ” ಎಂದು ಆಕ್ಷೇಪಿಸಿದರು.

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments