ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಿಸಿದ್ದು ವಿನಯ್ ಕುಲಕರ್ಣಿ ಎಂದು ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಲಾಗಿದೆ.
ಕೊಲೆ ಸಂಬಂಧ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಶಾಸಕ ವಿನಯ್ ಕುಲಕರ್ಣಿ ಅವರೇ ಯೋಗೇಶ್ ಗೌಡನನ್ನು ಕೊಲೆ ಮಾಡಿಸಿದ್ದು ಎಂದು ತಿಳಿಸಿದ್ದಾನೆ. ಹೀಗಾಗಿ ಆಪ್ತನ ತಪ್ಪೊಪ್ಪಿಗೆಯಿಂದ ಶಾಸಕ ವಿನಯ್ ಕುಲಕರ್ಣಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ವಿನಯ್ ಕುಲಕರ್ಣಿ ಅವರು ಬೆಂಗಳೂರಿನಿಂದ ಕೆಲವರನ್ನು ಕರೆಸಿ ಕೆಲಸ ಮಾಡಿಕೊಡುವಂತೆ ಒತ್ತಾಯ ಮಾಡಿದ್ದರು. ಬಳಿಕ, ಬೆಂಗಳೂರಿನಲ್ಲಿ ಪ್ರಕರಣದ 8ನೇ ಆರೋಪಿ ದಿನೇಶ್ನನ್ನು ಭೇಟಿಯಾಗಿ, ವಿನಯ್ ಕುಲಕರ್ಣಿ ಪ್ರಸ್ತಾಪ ಮುಂದಿಡಲಾಯಿತು. ಇದಕ್ಕೆ ದಿನೇಶ್ ಎರಡು ದಿನಗಳ ಕಾಲಾವಕಾಶ ಕೋರಿ, ಬಳಿಕ ಮುತ್ತಗಿಯನ್ನು ಭೇಟಿಯಾದ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ವಿನಯ್ ಕುಲಕರ್ಣಿ ಸೋದರ ಮಾವ ವಿಜಯಪುರ ಮೂಲದ ಚಂದ್ರಶೇಖರ್ ಇಂಡಿ ಪಿಸ್ತೂಲು ತಂದುಕೊಟ್ಟನು. ಪಿಸ್ತೂಲುಗಳನ್ನು ಮುತ್ತಗಿ ಕೈಗೆ ಕೊಡುವಾಗ ವಿನಯ್ ಕುಲಕರ್ಣಿ ಇದ್ದರು. ಬಳಿಕ, ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಬಾರಿ ಕೊಲೆಗೆ ಯತ್ನಿಸಲಾಯಿತಾದರೂ ವಿಫಲವಾಯಿತು. ಕೊನೆಗೆ, 2016ರ ಜೂನ್ 15ರಂದು ಜಿಮ್ನಲ್ಲಿ ಯೋಗೀಶ್ ಗೌಡನನ್ನು ಹತ್ಯೆ ಮಾಡಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ಈ ಮೊದಲು ಯೋಗೇಶ್ ಗೌಡನನ್ನು ಕೊಲೆ ಮಾಡಲು ವಿನಯ್ ಕುಲಕರ್ಣಿ ಹೇಳಿದಂತೆ ಧಾರವಾಡದ ವಿಕಾಸ್ ಕಲಬುರ್ಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ, ಸಂದೀಪ್ ಸವದತ್ತಿ ಹಾಗೂ ಮಹಾಬಲೇಶ್ವರ ಎಂಬ ಅಪರಾಧಿಕ ಹಿನ್ನೆಲೆಯ ವ್ಯಕ್ತಿಗಳನ್ನು ಭೇಟಿಯಾಗಿದ್ದೆ. ಅವರ ಮುಂದೆ ವಿನಯ್ ಕುಲಕರ್ಣಿ ವಿಚಾರವನ್ನು ಪ್ರಸ್ತಾಪಿಸಿದ್ದ ಎಂದು ಹೇಳಿದ್ದಾನೆ. ಆದರೆ, ಯೋಗೇಶ್ ಗೌಡನನ್ನು ಕೊಲೆ ಮಾಡಲು ಧಾರವಾಡದ ಹುಡುಗರು ವಿರೋಧ ವ್ಯಕ್ತಪಡಿಸಿದ್ದರು.