ಬೀದರ್ ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದು ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ, ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ” ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಇಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯ” ಎಂದಿದ್ದಾರೆ.
“ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವುದು ನಿಷಿದ್ಧ, ಆದರೆ ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು, ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು. ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ” ಎಂದು ಟೀಕಿಸಿದ್ದಾರೆ.
“ಮುಖ್ಯಮಂತ್ರಿಗಳು ಈ ಸಂಬಂಧವಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ” ಎಂದು ಆಗ್ರಹಿಸಿದ್ದಾರೆ.