ಅನಾರೋಗ್ಯದಿಂದ ಬಳಲುತ್ತಿದ್ದ CPI(M) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಮ್ ಯೆಚೂರಿ (Sitaram Yechury) ನಿಧನರಾಗಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಆಗಸ್ಟ್ 19 ರಂದು ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಾಗಿದ್ದರು. ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸೀತಾರಾಮ್ ಯೆಚೂರಿ ಅವರ ದೇಹವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾನ ಮಾಡಿದ್ದಾರೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ ಅವರು ಭಾರತೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮಹತ್ವದಾಗಿದ್ದು, ಮಾರ್ಕ್ಸ್‌ವಾದದ ತತ್ವಗಳಿಗೆ ಅವರ ಅಚಲ ಬದ್ಧತೆಗೆ ಹೆಸರುವಾಸಿಯಾಗಿದ್ದರು.
1974ರಲ್ಲಿ ಎಸ್‌ಎಫ್‌ಐ ಮೂಲಕ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಅವರು ಶೀಘ್ರವಾಗಿ ಉನ್ನತ ಮಟ್ಟಕ್ಕೆ ಏರಿದರು. ಮೂರು ಬಾರಿ JNU ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು ಮತ್ತು ನಂತರ SFI ಯ ಅಖಿಲ ಭಾರತ ಅಧ್ಯಕ್ಷರಾದರು. 1984 ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು ಶಾಶ್ವತ ಆಹ್ವಾನಿತರಾದರು. 1992 ರ ಹೊತ್ತಿಗೆ, ಅವರು ಪಾಲಿಟ್‌ಬ್ಯೂರೊದ ಸದಸ್ಯರಾದರು.