Homeಕರ್ನಾಟಕವಾಲ್ಮೀಕಿ ನಿಗಮ ಹಗರಣ | ಇ.ಡಿ ಮತ್ತು ಕೇಂದ್ರ ಸರ್ಕಾರದ ರಾಜ್ಯ ಸರ್ಕಾರ ಧರಣಿ

ವಾಲ್ಮೀಕಿ ನಿಗಮ ಹಗರಣ | ಇ.ಡಿ ಮತ್ತು ಕೇಂದ್ರ ಸರ್ಕಾರದ ರಾಜ್ಯ ಸರ್ಕಾರ ಧರಣಿ

ವಾಲ್ಮೀಕಿ ನಿಗಮ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಹೇಳುವಂತೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶಪ್ಪ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಮಂಗಳವಾರ ಧರಣಿ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹94.73 ಕೋಟಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಲು ಒತ್ತಡ ಹೇರುತ್ತಿರುವ ಬಗ್ಗೆ ಸಿದ್ದರಾಮಯ್ಯ ಈ ಮೊದಲೇ ಮಾಧ್ಯಮಗಳ ಮುಂದೆ ಆರೋಪಿಸಿದ್ದರು.

ಹಾಗೆಯೇ ದೆಹಲಿ, ಜಾರ್ಖಂಡ್‌ ಮಾದರಿಯಲ್ಲಿ ಮುಖ್ಯಮಂತ್ರಿಯವರನ್ನು ಪ್ರಕರಣದಲ್ಲಿ ಸಿಲುಕಿಸಲು ಇ.ಡಿ ಯತ್ನಿಸುತ್ತಿದೆ ಎಂದು ವಿಧಾನಮಂಡಲದ ಒಳಗೆ, ಹೊರಗೆ ಸಚಿವರು, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಆರೋಪಿಸಿದ್ದರು.

ಈ ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ವಿರುದ್ಧ ಬೆಂಗಳೂರು ನಗರದ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಬಿ. ಕಲ್ಲೇಶಪ್ಪ ಅವರು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಮೂಲಕ ಇ.ಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸಿರುವುದರಿಂದ ರಾಜ್ಯ ಸರ್ಕಾರವು ತನಿಖಾ ಸಂಸ್ಥೆ ಜೊತೆ ನೇರ ಸಂಘರ್ಷಕ್ಕೆ ಇಳಿದಿದೆ.

ಕೇಂದ್ರದ ವಿರುದ್ಧ ಕಾನೂನು ಪ್ರಕಾರ ಹೋರಾಟ: ಸಿಎಂ

ಪ್ರತಿಭಟನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಇ.ಡಿ ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ತನಿಖೆ ಮಾಡುತ್ತಿದ್ದಾರೆ. ಒಂದೇ ಕೇಸ್​ನಲ್ಲಿ ಮೂರು ತನಿಖಾ ಸಂಸ್ಥೆ ವಿಚಾರಣೆ ಮಾಡುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಹೇಳುತ್ತಿಲ್ಲ. ವಿಪಕ್ಷದವರು 186 ಕೋಟಿ‌ ದುರುಪಯೋಗ ಆಗಿದೆ ಅಂತಿದ್ದಾರೆ. ನಿಗಮದ ಹಣ ವರ್ಗಾಣೆ ಆಗಿರುವುದು 89.63 ಕೋಟಿ ರೂ. ಪ್ರಕರಣ ಸಂಬಂಧ ಈಗಾಗಲೇ 12 ಆರೋಪಿಗಳ ಬಂಧನವಾಗಿದೆ. ಅಧಿಕಾರಿಗಳು ಈಗಾಗಲೇ 34 ಕೋಟಿ ರಿಕವರಿ ಮಾಡಿದ್ದಾರೆ. ಶೇಕಡಾ 90ರಷ್ಟು ಎಸ್​ಐಟಿ ಅಧಿಕಾರಿಗಳ ತನಿಖೆ ಮುಗಿದಿದೆ. ಬ್ಯಾಂಕ್​ ಅಧಿಕಾರಿಗಳ ದೂರಿನ ಮೇರೆಗೆ ಸಿಬಿಐ ತನಿಖೆ ಮಾಡುತ್ತಿದೆ. ಆದರೆ ಇ.ಡಿ ತಂಡ ಸ್ವಯಂ ಪ್ರೇರಣೆಯಿಂದ ತನಿಖೆ ಮಾಡುತ್ತಿದೆ. ಪ್ರಕರಣ ಸಂಬಂಧ ಅಧಿಕಾರಿ ಕಲ್ಲೇಶ್​ರನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಸಿಎಂ, ಡಿಸಿಎಂ, ಸಚಿವರ ಹೆಸರೇಳುವಂತೆ ಒತ್ತಡ ಹಾಕಿದ್ದಾರೆ” ಎಂದು ದೂರಿದರು.

“ಅಧಿಕಾರಿ ಕಲ್ಲೇಶ್​​​ಗೆ ಬೆದರಿಸಿ, ಹೆದರಿಸಿ ಹೆಸರೇಳುವಂತೆ ಇ.ಡಿ ಒತ್ತಡ ಹಾಕಿದೆ. ಜೀವಬೆದರಿಕೆ ಹಾಕಿ ಒತ್ತಡ ಹಾಕಿದ್ದಾರೆಂದು ಕಲ್ಲೇಶ್ ಆರೋಪಿಸಿದ್ದಾರೆ. ಕಾಂಗ್ರೆಸ್​​​​ ಗುರಿಯಾಗಿಸಿಕೊಂಡು ಬೆದರಿಸುವ ಯತ್ನ ಆಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ದುರ್ಬಲಗೊಳಿಸುವ ಯತ್ನ ನಡೆದಿದೆ. ಇ.ಡಿಯವರ ಇಂತಹ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ಇ.ಡಿ ತನಿಖೆ ನಡೆಸುವುದಕ್ಕೆ ನಮಗೆ ತಕರಾರಿಲ್ಲ. ಆದರೆ ನಮ್ಮ ಸರ್ಕಾರವನ್ನು ಗುರಿಯಾಗಿಸುವ ಕೆಲಸ ಮಾಡುತ್ತಿದೆ. ಕಾನೂನಿಗೆ ವಿರುದ್ಧವಾಗಿ ವಾಮಮಾರ್ಗವಾಗಿ ಇ.ಡಿ ಕೆಲಸ ಮಾಡುತ್ತಿದೆ. ಇ.ಡಿ, ಕೇಂದ್ರದ ವಿರುದ್ಧ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ” ಎಂದರು.

ಇ.ಡಿ, ಕೇಂದ್ರದ ವಿರುದ್ಧ ನಮ್ಮ ಹೋರಾಟ: ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, “ಸರ್ಕಾರದ ಎಲ್ಲ ಮಂತ್ರಿಗಳು ಶಾಸಕರು ದೊಡ್ಡ ಪ್ರತಿಭಟನೆ ಮಾಡುತ್ತಿದ್ದೇವೆ. ವಾಲ್ಮೀಕಿ ‌ಹಗರಣ‌ ಬೆಳಕಿಗೆ ಬಂದಿದೆ. ತಪ್ಪಾಗಿದೆ ಎಂದು ನಮಗೆ ಮನವರಿಕೆಯಾಗಿದೆ. ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ವಾಲ್ಮೀಕಿ ನಿಗಮದ ಅಕ್ರಮ ಗೊತ್ತಾದ ತಕ್ಷಣ ಎಸ್‌ಐಟಿ ಅಧಿಕಾರಿಗಳ ಮೂಲಕ ನಾವು ಹಗರಣದ ತನಿಖೆ ಮಾಡಿಸುತ್ತಿದ್ದೇವೆ. ಈಗಾಗಲೇ ಶೇ.50ರಷ್ಟು ಹಣ ರಿಕವರಿ ಮಾಡಿದ್ದಾರೆ. ಎಸ್​ಐಟಿ ತನಿಖೆ ಮಧ್ಯೆಯೇ ಇ.ಡಿ ಪ್ರವೇಶಿಸಿ ವಿಚಾರಣೆ ಮಾಡ್ತಿದೆ. ಇ.ಡಿ ವಿಚಾರಣೆ ವೇಳೆ ಅಧಿಕಾರಿ ಕಲ್ಲೇಶ್​ಗೆ ಕಿರುಕುಳ ನೀಡಿದ್ದಾರೆ. ಸಚಿವರು, ಸಿಎಂ, ಡಿಸಿಎಂ ಹೆಸರೇಳಬೇಕೆಂದು ಕಿರುಕುಳ ನೀಡಿದ್ದಾರೆ. ಇ.ಡಿ, ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments