Homeಕರ್ನಾಟಕವಾಲ್ಮೀಕಿ ನಿಗಮ ಹಗರಣ | ಸಿಎಂಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯವಿಲ್ಲ: ಡಿ ವಿ ಸದಾನಂದಗೌಡ

ವಾಲ್ಮೀಕಿ ನಿಗಮ ಹಗರಣ | ಸಿಎಂಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯವಿಲ್ಲ: ಡಿ ವಿ ಸದಾನಂದಗೌಡ

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ರಾಹುಲ್ ಗಾಂಧಿಯವರಿಗೆ ಹಣ ಕಳುಹಿಸಿದ ವಿಚಾರ ಹೊರಕ್ಕೆ ಬರಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಸ್‍ಐಟಿಗಳು ರಾಜ್ಯ ಸರಕಾರ ನೀಡುವ ಆದೇಶ ಪಾಲಿಸುವ ಏಜೆನ್ಸಿಗಳು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ” ಎಂದು ಆಗ್ರಹಿಸಿದರು.

“ಇಷ್ಟು ದೀರ್ಘ ಕಾಲ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯ ಇಲ್ಲ. ಭ್ರಷ್ಟಾಚಾರಕ್ಕೆ ಪುಷ್ಟಿ ಕೊಡುವ ದಾರಿಯಲ್ಲಿ ಮುಂದೆ ಮುಂದೆ ಹೋಗುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದರೆ ಇಂಥ ಸಚಿವನನ್ನು ಮರುದಿನವೇ ವಜಾ ಮಾಡುತ್ತಿದ್ದೆ. ಚಂದ್ರಶೇಖರರ ಆತ್ಮಹತ್ಯೆ ನಡೆದಿದೆ. ಈ ಹಗರಣ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ” ಎಂದು ಟೀಕಿಸಿದರು.

“ಹಲವು ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾವಣೆ ಆಗಿದ್ದು, ಸರಕಾರ ಮಾಹಿತಿ ಕೊಡುತ್ತಿಲ್ಲ ಎಂದು ಟೀಕಿಸಿದರು. ನಿಗಮದ ಅಧ್ಯಕ್ಷರು ಸತ್ಯ ಸಂಗತಿ ಯಾಕೆ ಬಿಡುಗಡೆ ಮಾಡಿಲ್ಲ ಎಂದ ಅವರು, ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಹಾಗೂ ಸಿಬಿಐ ತನಿಖೆ ಮಾಡಿಸಲು ಒತ್ತಾಯಿಸಿದರು. ನಾಗೇಂದ್ರರು 2 ದಿನಗಳಿಂದ ಕಾಣೆಯಾಗಿದ್ದಾರೆ; ಇದರ ಕುರಿತು ಸಿಎಂ ಮಾಹಿತಿ ಕೊಡಲಿ” ಎಂದು ಆಗ್ರಹಿಸಿದರು.

“15 ಖಾಸಗಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಇದು ನೇರವಾಗಿ ಕಾಂಗ್ರೆಸ್ಸಿನ ಎಟಿಎಂಗೆ ಹೋಗುವ ಹಣವೆಂದು ಸಾಬೀತು ಪಡಿಸಿದೆ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳಿದ್ದರೂ ಸಿದ್ದರಾಮಯ್ಯನವರು ಜಾಣಕುರುಡರಾಗಿ ನಾಗೇಂದ್ರರ ರಾಜೀನಾಮೆ ಪಡೆದಿಲ್ಲ” ಎಂದು ಟೀಕಿಸಿದರು.

ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮುಖಂಡ ಜಗದೀಶ ಹಿರೇಮನಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments