ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬಿಜೆಪಿಯಿಂದ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಸಚಿವರು ರಾಜೀನಾಮೆ ನೀಡಿ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಮೃತ ಪಿ.ಚಂದ್ರಶೇಖರನ್ ಅವರ ಕುಟುಂಬದವರನ್ನು ಶಿವಮೊಗ್ಗದಲ್ಲಿ ಆರ್.ಅಶೋಕ್ ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಸರಕಾರದ ಮೊದಲ ವಿಕೆಟ್ ಪತನ ಖಚಿತ ಎಂದು ಭವಿಷ್ಯ ನುಡಿದರು.
“ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅವರ ಕುಟುಂಬ ಬೀದಿಗೆ ಬಂದಿದೆ. ಇಲ್ಲಿಗೆ ಬಂದ ಸಚಿವರು ಯಾವುದೇ ವ್ಯವಸ್ಥೆ ಮಾಡಿಲ್ಲ. ಯಾವುದೇ ಹಿರಿಯ ಅಧಿಕಾರಿಗಳು, ಗೃಹ ಸಚಿವರು ನೆರವು ನೀಡಿಲ್ಲ. 1 ಕೋಟಿ ರೂ. ಗೂ ಅಧಿಕ ಅಕ್ರಮ ನಡೆದಾಗ ಅದು ಸಿಬಿಐ ತನಿಖೆಗೆ ಒಳಪಡುತ್ತದೆ. ಬ್ಯಾಂಕ್‌ನವರು ಸಿಬಿಐಗೆ ವಹಿಸಿ ಎಂದು ಮನವಿ ಮಾಡಿದ್ದಾರೆ. ಇದು ಸಿಬಿಐಗೆ ಹೋಗುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಯದಿಂದಾಗಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಸಚಿವರು ಹಾಗೂ ಮುಖ್ಯಮಂತ್ರಿಯ ಬೆಂಬಲವಿಲ್ಲದೆ ಇಂತಹ ಅವ್ಯವಹಾರ ನಡೆಯಲು ಸಾಧ್ಯವಿಲ್ಲ” ಎಂದರು.
“ಸಿಐಡಿ ತನಿಖೆ ಎನ್ನುವುದು ಕಾಟಾಚಾರದ ತನಿಖೆ. ಇಂತಹ ತನಿಖೆ ಮಾಡಲು ಕುಟುಂಬದವರು ಅಥವಾ ವಿರೋಧ ಪಕ್ಷದವರು ಕೇಳಬೇಕು. ಆದರೆ ಯಾರೂ ಕೇಳದೆ ಸರ್ಕಾರವೇ ಪ್ರಕರಣ ಮುಚ್ಚಿಹಾಕಲು ತನಿಖೆ ಮಾಡಿಸುತ್ತಿದೆ. ದಲಿತರ 187 ಕೋಟಿ ರೂ. ಹಣ ಗುಳುಂ ಆದರೂ ಒಬ್ಬರನ್ನೂ ಬಂಧಿಸಿಲ್ಲ. ಅದೇ ಸಣ್ಣ ವಿಚಾರಗಳಿಗೆ ಮನೆಗೆ ಹೋಗಿ ಬಂಧಿಸುತ್ತಾರೆ. ಆರೋಪಿಗಳನ್ನು ಬಂಧಿಸಿದರೆ ಮುಖ್ಯಮಂತ್ರಿ ಮೇಲೆಯೇ ಆರೋಪ ಬರುತ್ತದೆ ಎಂಬ ಭಯವಿದೆ. ಅದಕ್ಕಾಗಿ ಸರಿಯಾಗಿ ತನಿಖೆ ಮಾಡಿಸುತ್ತಿಲ್ಲ” ಎಂದು ದೂರಿದರು.
ಗೃಹ ಸಚಿವರಿಗೆ ಹಿಡಿತವಿಲ್ಲ
“ಡಾ.ಜಿ.ಪರಮೇಶ್ವರ್ ಅವರಿಗೆ ಇಲಾಖೆಯಲ್ಲಿ ಆಸಕ್ತಿಯೂ ಇಲ್ಲ, ಹಿಡಿತವೂ ಇಲ್ಲ. ಗೃಹ ಇಲಾಖೆಯನ್ನು ಸಿಎಂ, ಡಿಸಿಎಂ ಮತ್ತು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಉಳಿಯಬೇಕೆಂದರೆ ಅವರಾಗಿಯೇ ಸಿಬಿಐ ತನಿಖೆಗೆ ವಹಿಸುವುದು ಉತ್ತಮ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಪಂಗಡದ ಜನರ ಬಗ್ಗೆ ಗೌರವವೇ ಇಲ್ಲ. ಗೌರವ ಇದ್ದರೆ ಸರಿಯಾದ ತನಿಖೆ ನಡೆಸಲಿ” ಎಂದು ಆಗ್ರಹಿಸಿದರು.
ಮತ್ತೊಂದು ಆತ್ಮಹತ್ಯೆ
“ಕೆಆರ್‌ಐಡಿಎಲ್ ಗುತ್ತಿಗೆದಾರ ಪಿ.ಸಿ.ಗೌಡರ್ ಅವರ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಈಗ ಉತ್ತರ ಹೇಳಬೇಕು. ಕೂಡಲೇ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಿ ತನಿಖೆಗೆ ಎಸ್‌ಐಟಿ ರಚಿಸಬೇಕು. ಗುತ್ತಿಗೆದಾರರ ಬಾಕಿ ಪಾವತಿಸಲು ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.