ಕೇಂದ್ರದ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶದಿಂದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿಯಾದ ಹಣದ ಮೂಲ ಪತ್ತೆಯಾಗಿದೆ, ನಿಜವಾದ ಅಪರಾಧಿಗಳ ಮುಖವಾಡ ಬಯಲಾಗಿದೆ. ರಾಜ್ಯ ಸರ್ಕಾರದ ಎಸ್ಐಟಿ ತನಿಖೆ ‘ಬೆಟ್ಟ ಅಗೆದು ಇಲಿ ಹಿಡಿದಂತೆ’ ಕಸರತ್ತು ನಡೆಸಿ ನಿಜವಾದ ಅಪರಾಧಿಗಳನ್ನು ರಕ್ಷಿಸಲು ವ್ಯರ್ಥ ಪ್ರಯತ್ನ ನಡೆಸಿದೆ ಎನ್ನುವುದು ಅದು ಸಲ್ಲಿಸಿರುವ ಆರೋಪ ಪಟ್ಟಿಯೇ ಸಾಕ್ಷಿ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಇತಿಹಾಸದಲ್ಲಿ ಕಂಡು ಕೇಳರಿಯದ ಸರ್ಕಾರಿ ಖಾತೆಗಳಿಗೆ ಕನ್ನ ಹಾಕಿದ ಹಗರಣ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಮೇಲುಸ್ತುವಾರಿಯಲ್ಲೇ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ‘ಬೇಲಿಯೇ ಎದ್ದು ಹೊಲ ಮೇಯ್ದ’ ಉದಾಹರಣೆ ಉಲ್ಲೇಖಿಸಲು ಭವಿಷ್ಯತ್ತಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮೊದಲನೆಯ ಸ್ಥಾನದಲ್ಲಿ ನಿಲ್ಲಲಿದೆ, ಸದ್ಯ ಇಡಿ ಪಾರದರ್ಶಕವಾಗಿ ತನಿಖೆ ನಡೆಸಿ ಕಾಂಗ್ರೆಸ್ ಸರ್ಕಾರದ ಸಚಿವರೇ ಭಾಗಿಯಾಗಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ” ಎಂದಿದ್ದಾರೆ.
“ಲೂಟಿಯಾದ ಹಣ ಯಾರ್ಯಾರಿಗೋ ಹರಿದು ಹಂಚಿ ಹೋಗಿರುವ ಭಾಗದಲ್ಲಿ ಲೋಕಸಭಾ ಚುನಾವಣೆಗೆ ಬಹುದೊಡ್ಡ ಮೊತ್ತ ಬಳಕೆಯಾಗಿರುವುದು ಸ್ಪಷ್ಟವಾಗಿದೆ. ರಾಜ್ಯದ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಯಾವ ಪರಿಯಲ್ಲಿ ಚುನಾವಣೆಯನ್ನು ಜಯಿಸಿದೆ ಎನ್ನುವುದನ್ನು ಬಳ್ಳಾರಿಯ ಲೋಕಸಭೆಯ ಫಲಿತಾಂಶದಲ್ಲಿ ಉತ್ತರ ದೊರಕಿದೆ” ಎಂದು ಹೇಳಿದ್ದಾರೆ.
“ದುರ್ಮಾರ್ಗಗಳಿಂದ ಗಳಿಸಿದ ಕಪ್ಪು ಹಣದಿಂದ ಚುನಾವಣೆ ಜಯಿಸುತ್ತಿದ್ದ ಕಾಂಗ್ರೆಸ್ ಇದೀಗ ಸರ್ಕಾರಿ ಖಾತೆಯಿಂದ ಲೂಟಿಯಾದ ಹಣದಿಂದಲೂ ಚುನಾವಣೆ ನಿರ್ವಹಿಸುವಷ್ಟು ಕೀಳುಮಟ್ಟದ ಕ್ರಿಮಿನಲ್ ಮಾರ್ಗ ಅನುಸರಿಸುತ್ತಿದೆ, ಇನ್ನು ‘ಕೈ’ ಪಕ್ಷದ ವರಿಷ್ಠರಿಗೆ ಯಾವ ನೈತಿಕತೆಯೂ ಉಳಿದಿಲ್ಲ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಯಾವ ಲಜ್ಜೆಗೇಡಿ ಮಾರ್ಗವನ್ನು ಅನುಸರಿಸಲು ಹಿಂದೇಟು ಹಾಕುವುದಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತದೆ” ಎಂದು ಟೀಕಿಸಿದ್ದಾರೆ.
“ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಲೂಟಿಕೋರತನದ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ಲಜ್ಜೆತನದ ಪರಮಾವಧಿಯಾಗಿದೆ. ಇ.ಡಿ ತನಿಖೆ ಇನ್ನಷ್ಟು ವಿಸ್ತರಿಸಿದರೆ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ಬೆನ್ನಿಗೆ ನಿಂತಿದ್ದ ದೊಡ್ಡ ಶಕ್ತಿಗಳ ಮುಖವಾಡವೂ ಬಯಲಾಗುತ್ತದೆ. ಮುಂದಿನ ವಿಚಾರಣೆಯಲ್ಲಿ ಈ ಹಗರಣದ ಪೂರ್ಣ ಸತ್ಯ ಬಯಲಾಗಲಿದೆ” ಎಂದು ಹೇಳಿದ್ದಾರೆ.
“ತನ್ನ ಸರ್ಕಾರದ ಸಚಿವರೊಬ್ಬರು ಈ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾದರೂ ಅದರ ಹೊಣೆಯನ್ನು ಹೊರುವಲ್ಲಿ ಮುಖ್ಯಮಂತ್ರಿಗಳು ಹಾಗೂ ಇಡೀ ಕಾಂಗ್ರೆಸ್ ಸರ್ಕಾರ ಏಕೆ ಹಿಂಜರಿಯುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
“ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ ಹಣ ಬಳಕೆಯಾಗಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ. ಚುನಾವಣಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಸಿ ಈ ಆಯ್ಕೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.