Homeಕರ್ನಾಟಕವಾಲ್ಮೀಕಿ ನಿಗಮ ಅಕ್ರಮ | ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ: ಡಿ ಕೆ ಶಿವಕುಮಾರ್

ವಾಲ್ಮೀಕಿ ನಿಗಮ ಅಕ್ರಮ | ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ: ಡಿ ಕೆ ಶಿವಕುಮಾರ್

ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ದೆಹಲಿ ಪ್ರವಾಸದಿಂದ ಮರಳಿದ ನಂತರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದರು.

“ರಾಜೀನಾಮೆ ಕೇಳುವುದು ವಿರೋಧ ಪಕ್ಷಗಳ ಧರ್ಮ, ಕೇಳುತ್ತಾರೆ. ನಾವು ಈ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ಆಧಾರವಿಲ್ಲದೇ ಆರೋಪ ಮಾಡಿದ ಮಾತ್ರಕ್ಕೆ ನಾವು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ತಪ್ಪು ಯಾರೇ ಮಾಡಿದರೂ ತಪ್ಪೇ. ತಕ್ಷಣವೇ ಎಫ್ಐಆರ್ ದಾಖಲಿಸಿ, ವ್ಯವಸ್ಥಾಪಕ ನಿರ್ದೇಶಕರ ಅಮಾನತು ಮಾಡಲಾಗಿದೆ. ತಪ್ಪು ಮಾಡಿರುವುದು ಸಾಬೀತಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು”ಎಂದರು.

ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ಕೇಳಿದ್ದೀರಿ, ಈಗ ಬಿಜೆಪಿ ಕೂಡ ಈ ವಿಚಾರದಲ್ಲಿ ಸಚಿವರ ರಾಜೀನಾಮೆ ಕೇಳುತ್ತಿದೆ ಎಂದಾಗ, “ಆತ್ಮಹತ್ಯೆ ಪತ್ರದಲ್ಲಿ ಸಚಿವರ ಮೌಖಿಕ ಆದೇಶವಿದೆ ಎಂದು ಅಧಿಕಾರಿಗಳು ಹೇಳಿದ್ದರು ಎಂದು ಇದೆ. ನಾಗೇಂದ್ರ ಅವರ ವಿರುದ್ಧ ನೇರ ಆರೋಪವಿಲ್ಲ. ಈ ವಿಚಾರವಾಗಿ ಸರ್ಕಾರ ತನಿಖೆ ಮಾಡಲಿದೆ. ಇದು ಸಣ್ಣ ವಿಚಾರವಲ್ಲ. 10 ಲಕ್ಷ ಅಕ್ರಮ ನಡೆದರೂ ಅಕ್ರಮವೇ. ನಾನು ಪ್ರಕರಣದ ಎಫ್ಐಆರ್ ಓದಿದೆ. ಸಚಿವರನ್ನು ಕರೆಸಿ ಮಾಹಿತಿ ಪಡೆಯುತ್ತೇವೆ. ಸತ್ಯಾಸತ್ಯತೆ ಪರಿಶೀಲಿಸುತ್ತೇವೆ” ಎಂದು ಹೇಳಿದರು.

65 ಮಂದಿ ಶಾರ್ಟ್ ಲಿಸ್ಟ್

“ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ದೆಹಲಿ ನಾಯಕರ ಜತೆ ಚರ್ಚೆ ಮಾಡಿ ಎಲ್ಲ ವರ್ಗದ 65 ಸಂಭಾವ್ಯರ ಪಟ್ಟಿಯನ್ನು ಕೊಟ್ಟು ಬಂದಿದ್ದೇವೆ. ಉಳಿದಂತೆ ಹೈಕಮಾಂಡ್ ನಾಯಕರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಯತೀಂದ್ರ ಅವರ ವಿಚಾರವಾಗಿ ಹೈಕಮಾಂಡ್ ನಾಯಕರು ಈಗಾಗಲೇ ಮಾತು ಕೊಟ್ಟಿದ್ದರು. ಕೇವಲ ಬೆಂಗಳೂರು ಮಾತ್ರವಲ್ಲದೇ ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ವಲಯಗಳಿಂದಲೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಂಗಳೂರಿನಲ್ಲಿ 21, ಚಿಕ್ಕಮಗಳೂರಿನಲ್ಲಿ 9 ಮಂದಿ ಆಕಾಂಕ್ಷಿಗಳಿದ್ದಾರೆ” ಎಂದರು.

ಹಿರಿಯರ ಅಭಿಪ್ರಾಯ ಕೇಳಬೇಕಿತ್ತು ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾವು ಅವರ ಅಭಿಪ್ರಾಯ ಕೇಳಿದ್ದೇವೆ. ಪರಮೇಶ್ವರ ಅವರು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ” ಎಂದರು.

ಜೂ.2 ರಂದು ಶಾಸಕಾಂಗ ಪಕ್ಷದ ಸಭೆ

“ಜೂನ್ 2 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆ‌ಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಪರಿಷತ್ ಸದಸ್ಯರು, ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗುವುದು. ಪರಿಷತ್ ಚುನಾವಣೆ ಸೇರಿದಂತೆ ಪಕ್ಷದ ಕೆಲವು ವಿಚಾರ ಚರ್ಚೆ ಮಾಡಲಾಗುವುದು. ಜೂನ್ 1 ರಂದು ಕರೆಯಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ” ಎಂದು ತಿಳಿಸಿದರು.

ದೆಹಲಿ ಭೇಟಿಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಗಿದೆಯೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಸುರೇಶ್ ಅವರ ಹೆಸರು ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸುರೇಶ್ ಎಂಬುದು ಶುದ್ದ ಸುಳ್ಳು. ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಗಿಯಲಿ. ನಾನು ಅಧಿಕಾರ ಬಿಡುವ ವೇಳೆಗೆ ಒಂದು ಹಂತಕ್ಕೆ ತಂದು ನಿಲ್ಲಿಸಬೇಕು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಕಟ್ಟಡ ದುರ್ಬಲವಾಗುತ್ತಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಬೇಕಿದೆ” ಎಂದರು.

ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುತ್ತೀರಾ ಎಂದು ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments