ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ.
ರಾತ್ರಿ 10.45ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ. 37 ಮಕ್ಕಳನ್ನು ರಕ್ಷಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಸದ್ಯಕ್ಕೆ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಸುವುದಕ್ಕಾಗಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ವಾರ್ಡ್‌ನಲ್ಲಿ ದಟ್ಟ ಹೊಗೆ ತುಂಬಿತ್ತು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ, ಕಿಟಕಿ ಗಾಜುಗಳನ್ನು ಒಡೆದು ರೋಗಿಗಳನ್ನು ಪಾರು ಮಾಡಲು ಪ್ರಯತ್ನಿಸಿದರು. ರೋಗಿಗಳು ಹಾಗೂ ಅವರ ಆರೈಕೆ ಮಾಡುವವರು ಆತಂಕಕ್ಕೆ ಒಳಗಾಗಿರುವುದು, ಪೊಲೀಸರು ಅವರ ರಕ್ಷಣೆಗೆ ಪ್ರಯತ್ನಿಸುತ್ತಿದ್ದರು ಎನ್ನಲಾದ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜಿಲ್ಲಾಡಳಿತ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದರು.
ದುರಂತದಲ್ಲಿ ಮಕ್ಕಳು ಮೃತ ಪಟ್ಟಿರುವ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಟ್ಟು ಕರಕಲಾದ ದೇಹಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಜೀವ ರಕ್ಷಿಸಿಕೊಳ್ಳಲು ಅಲ್ಲಿದ್ದವರು ಪ್ರಯತ್ನಿಸಿದ ಕಾರಣ, ಆಸ್ಪತ್ರೆಯಲ್ಲಿ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿತ್ತು.
ಘಟನೆಯ ವೇಳೆ ಎನ್‌ಐಸಿಯುನಲ್ಲಿ ಒಟ್ಟು 54 ಮಕ್ಕಳನ್ನು ದಾಖಲಿಸಲಾಗಿದ್ದು, 44 ಮಕ್ಕಳನ್ನು ರಕ್ಷಿಸಲಾಗಿದೆ. ಬಲಿಯಾದವರ ಪೈಕಿ ಏಳು ಮಕ್ಕಳನ್ನು ಗುರುತಿಸಲಾಗಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.