Homeಕರ್ನಾಟಕಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ; ಮಧ್ಯಮ ವರ್ಗಕ್ಕೆ ಬಂಪರ್‌ ಉಡುಗೊರೆ: ಆರ್ ಅಶೋಕ್

ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ; ಮಧ್ಯಮ ವರ್ಗಕ್ಕೆ ಬಂಪರ್‌ ಉಡುಗೊರೆ: ಆರ್ ಅಶೋಕ್

ಯುಪಿಎ ಅವಧಿಯಲ್ಲಿ ಅನಗತ್ಯ ವೆಚ್ಚ ಹಾಗೂ ಲೂಟಿಯಿಂದಾಗಿ ಅಧಿಕ ಗಾತ್ರದ ಬಜೆಟ್‌ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವುಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2013-14 ರ ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಬಜೆಟ್‌ ಗಾತ್ರ 16,65,297 ಕೋಟಿ ರೂ. ಆಗಿತ್ತು. 2025-26 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 50,65,345 ಕೋಟಿ ರೂ.ಗಾತ್ರದ ಬಜೆಟ್‌ ಮಂಡಿಸಿದೆ. ಲೂಟಿಯಾಗುತ್ತಿದ್ದ ಹಣವನ್ನು ಮರಳಿ ತಂದಿದ್ದರಿಂದ ಬಜೆಟ್‌ ಗಾತ್ರ ಹೆಚ್ಚಾಗಿದೆ” ಎಂದರು.

“ಹಿಂದೆ 11,09,997 ಕೋಟಿ ರೂ. ಯೋಜನೇತರ ವೆಚ್ಚವಾಗಿದ್ದರೆ, ಈಗ ಅದು 39,44,255 ಕೋಟಿ ರೂ. ಗೆ ಏರಿದೆ. ಬಂಡವಾಳ ವೆಚ್ಚ ಆಗ 2,29,129 ಕೋಟಿ ರೂ. (13.7%) ಆಗಿದ್ದು, ಈಗ 11,21,090 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ 9 ಲಕ್ಷ ಕೋಟಿ ರೂ. (22.13%) ಏರಿಕೆ ಕಂಡಿದೆ. ಅಂದರೆ ತೆರಿಗೆ ಸೋರಿಕೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ” ಎಂದು ತಿಳಿಸಿದರು.

“ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸಾಲದ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂ. ಗೆ ಏರಿಸಲಾಗಿದೆ. ಸ್ಟಾರ್ಟ್‌ಅಪ್ ಕಂಪನಿಗಳಿಗೆ 10 ಕೋಟಿ ರೂ.ನಿಂದ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ವರ್ಗದ 5 ಲಕ್ಷ ಮಹಿಳೆಯರಿಗೆ ಹೊಸ ಯೋಜನೆಯಡಿ ಟರ್ಮ್‌ಲೋನ್‌ ನೀಡಲಾಗುತ್ತದೆ” ಎಂದರು.

“ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಕೇಂದ್ರ ಸರ್ಕಾರದಿಂದ 1 ಕೋಟಿ ತಾಯಂದಿರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ತರಲಾಗಿದೆ. ಇದು ಬಾಣಂತಿಯರ ಆರೋಗ್ಯ ರಕ್ಷಣೆಗೆ ಸಹಾಯವಾಗಲಿದೆ” ಎಂದರು.

ಮಧ್ಯಮ ವರ್ಗಕ್ಕೆ ಉಡುಗೊರೆ

“ಮಧ್ಯಮ ವರ್ಗಕ್ಕೆ ಬಂಪರ್‌ ಉಡುಗೊರೆ ನೀಡಲಾಗಿದೆ. 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಗಾಳಿ ಒಂದನ್ನು ಬಿಟ್ಟು ಎಲ್ಲಕ್ಕೂ ತೆರಿಗೆ ವಿಧಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ತೆರಿಗೆಯನ್ನು ಹೇರಿಲ್ಲ” ಎಂದು ಹೇಳಿದರು.

“ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಕೇಂದ್ರ ಆರಂಭಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ಕ್ಯಾನ್ಸರ್‌ ಸೇರಿದಂತೆ 36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುತ್ತದೆ. ಟಿವಿ, ಸ್ವದೇಶಿ ಉಡುಪು, ಚರ್ಮ ಉತ್ಪನ್ನಗಳ ದರ ಇಳಿಕೆಯಾಗಲಿದೆ” ಎಂದರು.

“ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಕಾಂಗ್ರೆಸ್‌ ಇನ್ನೂ ಕೇಂದ್ರದಿಂದ ತಾರತಮ್ಯ ಎಂದು ಹೇಳುತ್ತಲೇ ಇದೆ. ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರು ಅಭಿನಂದನೆ ತಿಳಿಸಿಲ್ಲ. ಜಲಜೀವನ್‌ ಮಿಷನ್‌ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಎಲ್ಲ ಯೋಜನೆಗಳು ರಾಜ್ಯದ ಜನರಿಗೆ ಸಿಗಲಿದೆ. ಆದರೆ ಕರ್ನಾಟಕಕ್ಕೆ ಏನೂ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕರು ಸುಳ್ಳು ಹೇಳುತ್ತಿದ್ದಾರೆ” ಎಂದು ದೂರಿದರು.

“ಸಿಎಂ ಸಿದ್ದರಾಮಯ್ಯನವರ ಸಂತೆ ಭಾಷಣವನ್ನು ಯಾರೂ ಕೇಳುವುದಿಲ್ಲ. ಮನಮೋಹನ್‌ ಸಿಂಗ್‌ ಅವರನ್ನು ಕೇಳಿದ ಕೂಡಲೇ ಅನುದಾನ ಕೊಟ್ಟಿದ್ದಾರಾ? ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಬೇಕೆಂದು ಇವರೇ ನಿಯಮ ಮಾಡಿದ್ದು, ಈಗ ಇವರೇ ಅದನ್ನು ವಿರೋಧಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಜನರೇ ಚೊಂಬು ಕೊಡುವ ಕಾಲ ಬರಲಿದೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ದೂರಿದ್ದಾರೆ. ಈ ಸಮಸ್ಯೆಯನ್ನು ಮೊದಲು ಪರಿಹರಿಸಲಿ. ಈ ಸರ್ಕಾರ ಬೀಡಾಡಿ ದನಗಳಂತಾಗಿದೆ. ಇಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲ” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments