ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ಕೇತಗಾನಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಬಂಧಿಕರು ಸೇರಿದಂತೆ ಇತರರು ಒತ್ತುವರಿ ಮಾಡಿರುವ 15 ಎಕರೆ ಸರ್ಕಾರಿ ಭೂಮಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ.
ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ಅನ್ವಯ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಇಳಿದಿದೆ. ಹೆಚ್.ಡಿ.ಕುಮಾರಸ್ವಾಮಿ ತೋಟದ ಮನೆಯ ಸುತ್ತಮುತ್ತಲಿನ ಒತ್ತುವರಿ ಜಾಗ ತೆರವಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್‌ಡಿಕೆ ತೋಟದ ಮನೆ ಮುಂದೆ ಐದು ಜೆಸಿಬಿ ವಾಹನಗಳು, ಎರಡೂರು ಟ್ರಾಕ್ಟರ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಕೋರ್ಟ್ ಆದೇಶ ಹಾಗೂ ಒತ್ತುವರಿ ಸರ್ವೆ ವರದಿಯೊಂದಿಗೆ ಕುಮಾರಸ್ವಾಮಿ ಅವರ ತೋಟದ ಮನೆ ಜಾಗಕ್ಕೆ ಬೆಳಿಗ್ಗೆ 11.45ರ ಸುಮಾರಿಗೆ ಬಂದಿದ್ದಾರೆ. ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ, ತಹಶೀಲ್ದಾರ್ ತೇಜಸ್ವಿನಿ, ಸರ್ವೆ ಅಧಿಕಾರಿ ಹನುಮೇಗೌಡ, ಪೊಲೀಸರು ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದಾರೆ.
ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕೆಲವು ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣವಾಗಿದೆ.
“ಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ. ಹಲವರಿಗೆ ಸೇರಿರುವ 12 ಸರ್ವೆ ನಂಬರ್‌ಗಳ 15 ಎಕರೆಯಷ್ಟು ಜಾಗ ಒತ್ತುವರಿ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.