ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ.1) ಮಂಡಿಸಿದ 2025 -26ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ರಾಜ್ಯದ ಸಚಿವರು ಮತ್ತು ಕಾಂಗ್ರೆಸ್ ನಾಯಕರು ತೀವ್ರ ಬೇಸರ ಹೊರಹಾಕಿದ್ದಾರೆ. ರಾಜ್ಯದ ಪ್ರಮುಖ ಸಚಿವರು ಕೇಂದ್ರ ಬಜೆಟ್ ಅನ್ನು ಹೇಗೆ ವಿಶ್ಲೇಷಿಸಿದ್ದಾರೆ ಇಲ್ಲಿದೆ.
ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳ ದಿನ: ಕೃಷ್ಣ ಬೈರೇಗೌಡ
“ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ. ರಾಜ್ಯದ ಯಾವ ಬೇಡಿಕೆಯೂ ಈಡೇರಿಲ್ಲ. ನಮ್ಮ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಕರ್ನಾಟಕದವರು ಕಡಲೆ ಬೀಜ ತಿನ್ನೋಕೆ ಇರೋದಾ? ನಮ್ಮ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ. ಇದು ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ದ್ರೋಹ. 11,495 ಕೋಟಿ ಫೈನಾನ್ಸ್ ಕಮಿಷನ್ ಕೊಡಲು ಹೇಳಿತ್ತು. ಬರಬೇಕಾದ ಅನುದಾನದ ಬಗ್ಗೆ ಚಕಾರ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಇಂದು ನೈಯಾ ಪೈಸಾ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆ ಏನೂ ನೀಡಿಲ್ಲ. ಬೆಂಗಳೂರು ದೇಶಕ್ಕೆ ಉದ್ಯೋಗ ಕೊಡ್ತಿದೆ. ರಪ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡ್ತಿದೆ. ಆದ್ರೂ ಬಜೆಟಲ್ಲಿ ಬೆಂಗಳೂರಿಗೆ ಏನೂ ಇಲ್ಲ. ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ. ತೆರಿಗೆ ಕಟ್ಟಿದ ಕನ್ನಡಿಗರು ಮೋದಿಗೆ ಕಂಡಿಲ್ಲ. ನಮ್ಮ ರಾಜ್ಯ ಕೇವಲ ದುಡಿಯವ ಆಳಿನ ರೀತಿ ಕಾಣುತ್ತಿದೆ. ಸರ್ಕಾರದ ಪರವಾಗಿ ಕೇಂದ್ರ ಬಜೆಟ್ ಅನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ: ಚಲುವರಾಯಸ್ವಾಮಿ
“ಕೇಂದ್ರ ಬಜೆಟ್ ಕೃಷಿಕರ ಪಾಲಿಗೆ ನಿರಾಶಾದಾಯಕವಾಗಿದೆ. ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಕೃಷಿಗೆ ಕಡಿಮೆ ಆದ್ಯತೆ ನೀಡಲಾಗಿದೆ. ಕೃಷಿ ವೈಜ್ಞಾನಿಕ ಸಂಶೋಧನೆಗಳಿಗೆ ಸಾಕಷ್ಟು ಹಣಕಾಸು ಒದಗಿಸಲಾಗಿಲ್ಲ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಹಣಕಾಸು ನೀಡಲಾಗಿಲ್ಲ” ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
“ಪ್ರಮುಖ ಆಹಾರ, ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಮಂಡಳಿಗಳನ್ನು ರಚಿಸಬೇಕೆಂಬ ಬೇಡಿಕೆ ನಿರೀಕ್ಷೆಯಾಗಿಯೇ ಉಳಿದಿದೆ. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಲಾಗುವ ನಿರೀಕ್ಷೆ ಹುಸಿಯಾಗಿದೆ. ಆರ್.ಕೆ.ವಿ.ವೈ ಯೋಜನೆಯ ಅನುದಾನ ಕಡಿತಗೊಳಿಸಲಾಗಿದ್ದು, ರಾಜ್ಯಗಳಿಗೆ ಅನ್ಯಾಯವಾಗಿದೆ. ಕೃಷಿ ವಲಯಕ್ಕೆ ನಬಾರ್ಡ್ ನಲ್ಲಿ ನೀಡಲಾಗುವ ಅನುದಾನ ಕಡಿಮೆಯಾಗಿದ್ದು, ಕರ್ನಾಟಕ ರಾಜ್ಯವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೃಷಿ ಮೂಲಭೂತ ಸೌಕರ್ಯ ವಲಯಕ್ಕೆ ಆದ್ಯತೆ ನೀಡಿಲ್ಲ. ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಆಹಾರ ಸಂಸ್ಕರಣೆ ರಫ್ತು ಉತ್ತೇಜನಕ್ಕೆ ಪ್ರೋತ್ಸಾಹಕರ ಹೊಸ ಯೋಜನೆಗಳಿಲ್ಲ. ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಅಗ್ರಿ ಡಿಜಿಟಲ್ ಇಂಡಿಯಾ ಪ್ರಗತಿ ಕಂಡಿಲ್ಲ ಈ ಬಾರಿ ಬಜೆಟ್ ನಲ್ಲಿ ಇದು ಮಾಯವಾಗಿದೆ. ಕೃಷಿ ಮೂಲಭೂತ ಸೌಕರ್ಯ ನಿಧಿಗೆ ಸರಿಯಾದ ಅನುಷ್ಠಾನ ಯೋಗ್ಯವಲ್ಲದ ನೀತಿ ಇರುವುದರಿಂದ ಯಾವುದೇ ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನ ಕಂಡಿಲ್ಲ. ಅನುಷ್ಠಾನ ಯೋಗ್ಯ ಯೋಜನೆ ರೂಪಿಸುವ ಆಶಯವಿತ್ತು, ಆದರೆ ನಿರಾಸೆಯಾಗಿದೆ” ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ: ಪರಮೇಶ್ವರ್
ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಅಭಿವೃದ್ಧಿಯಿಂದ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದೇಶದ ದಕ್ಷಿಣ ಭಾಗದ ರಾಜ್ಯಗಳ ಜನರ ತೆರಿಗೆಯ ಸಂಪತ್ತನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಸುರಿಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ನೀರಾವರಿ ಯೋಜನೆಗಳನ್ನು, ರೈತರ ಆದಾಯ ಹೆಚ್ಚಿಸುವಂಥ ಬಲಿಷ್ಟವಾದ ಯೋಜನೆಗಳನ್ನು ರೂಪಿಸಿಲ್ಲ. ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಿಲ್ಲ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಮೂವರು ಸಚಿವರಿದ್ದರು, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿನ ಮಹಾನಗರಗಳ ಸುರಕ್ಷತೆಗೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡುವ ನಿರೀಕ್ಷೆಯು ಹುಸಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಜನತೆಗೆ ಬಜೆಟ್‌ನಲ್ಲಿ ಮತ್ತೊಮ್ಮೆ ಮೋಸ ಮಾಡಿದೆ” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಯುವಕರ ಕೈಗೆ ಉದ್ಯೋಗ ನೀಡುವ ಯೋಜನೆಗಳೇ ಇಲ್ಲ: ಈಶ್ವರ ಖಂಡ್ರೆ
ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ. ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಎಲ್ಲ ವಸ್ತುಗಳಿಗೂ ಎಂ.ಎಸ್.ಪಿ. ಇರುವಾಗ ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂ.ಎಸ್.ಪಿ. ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ. ರೈತರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಬಜೆಟ್‌ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಇಂತಹ ತಾರತಮ್ಯ ಸರ್ವತ ಸಮರ್ಥನೀಯವಲ್ಲ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ಬಜೆಟ್ ನಾಂದಿ ಹಾಡಿದೆ. ಕರ್ನಾಟಕದ ನಿರೀಕ್ಷೆಗಳೂ ಹುಸಿಯಾಗಿವೆ. ಬಜೆಟ್ ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಎನ್.ಡಿ.ಎ. ಆಡಳಿತ 11 ವರ್ಷಗಳ ಕಾರ್ಯಕಾಲದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನಿರುದ್ಯೋಗ ಸಮಸ್ಯೆ ಉಲ್ಬಣಿಸಿದೆ. ಈ ಬಜೆಟ್ ನಲ್ಲಿ ಕೂಡ ದುಡಿಯುವ ಯುವಕರ ಕೈಗೆ ಉದ್ಯೋಗ ನೀಡುವ ಯೋಜನೆ ರೂಪಿಸದಿರುವುದು ದುರ್ದೈವ” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.