Homeಕರ್ನಾಟಕಉದಯಗಿರಿ ಕಲ್ಲು ತೂರಾಟ: ಪೊಲೀಸರಿಂದ ತಪ್ಪಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್‌

ಉದಯಗಿರಿ ಕಲ್ಲು ತೂರಾಟ: ಪೊಲೀಸರಿಂದ ತಪ್ಪಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್‌

ಉದಯಗಿರಿಯಲ್ಲಿ ಕಲ್ಲು ತೂರಾಟ ಮಾಡಿರುವವರು 15- 16 ವರ್ಷದ ಹುಡುಗರು. ಈ ವೇಳೆ ಪೊಲೀಸರು ಅತ್ಯುತ್ತಮವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಯಾರಿಗೂ ಅಪಾಯವಾಗದ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮೈಸೂರಿನ ಗಲಭೆ ಪೀಡಿತ ಪ್ರದೇಶ ಉದಯಗಿರಿಗೆ ಬುಧವಾರ ಭೇಟಿ ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪು. ಯಾವುದೇ ರೀತಿಯ ತಪ್ಪು ನಡೆದಿದ್ದರೂ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ನಾನು ಪೊಲೀಸರಿಂದ ವರದಿ ತರಿಸಿಕೊಂಡಿದ್ದೇನೆ. ಘಟನೆ ನಡೆದ ತಕ್ಷಣ ಮುಸಲ್ಮಾನ ಸಮುದಾಯದ ಹಿರಿಯ ಮುಖಂಡರುಗಳು ಬಂದು ಪರಿಸ್ಥಿತಿ ನಿಭಾಯಿಸಿದ್ದಾರೆ. ಗಲಾಟೆ ತಡೆಯಲು ಬಂದ ಮುಸ್ಲಿಂ ಮುಖಂಡರಿಗೂ ಏಟುಗಳು ಬಿದ್ದಿವೆ. ಪೊಲೀಸ್ ಅಧಿಕಾರಿ ಮುತ್ತುರಾಜ್ ಅವರ ಕಾಲಿಗೂ ಏಟಾಗಿದೆ. ಈ ವಿಡಿಯೋವನ್ನು ನಾನು ನೋಡಿದ್ದೇನೆ” ಎಂದರು.

ಮೈಸೂರಿನ ಉದಯಗಿರಿಯಲ್ಲಿನ ಗಲಭೆ ಹಾಗೂ ಈ ಪ್ರಕರಣದಲ್ಲಿ ಪೊಲೀಸರದ್ದೇ ತಪ್ಪಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸಚಿವರ ಹೇಳಿಕೆ ಕುರಿತು ಮುಖ್ಯಮಂತ್ರಿಗಳು, ಗೃಹಸಚಿವರು ಉತ್ತರಿಸಲಿದ್ದಾರೆ. ಉದಯಗಿರಿ ಪ್ರಕರಣದಲ್ಲಿ ಪೊಲೀಸ್ ನವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಯಾರು ಏನು ಪದ ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸ್ ಅವರಿಗಾದರೆ ರಕ್ಷಣೆಯಿತ್ತು, ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ” ಎಂದು ಹೇಳಿದರು.

ಪೊಲೀಸರ ಪರವಾಗಿ ಇಲ್ಲಿಯೇ ನಿಂತು ಮಾತನಾಡುತ್ತಿದ್ದೇನೆ

ಸರ್ಕಾರ ಪೊಲೀಸರ ಪರವಾಗಿ ನಿಲ್ಲುತ್ತದೆಯೇ ಎಂದು ಕೇಳಿದಾಗ, “ನಾನು ಡಿಸಿಎಂ ಆಗಿ ಘಟನೆ ನಡೆದ ಇದೇ ಭೂಮಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಇದಕ್ಕಿಂತ ಅಧಿಕೃತ ಹೇಳಿಕೆ ಇನ್ಯಾರದ್ದು ಬೇಕು? ಮುಖ್ಯಮಂತ್ರಿಗಳು ಚೇತರಿಸಿಕೊಳ್ಳಲು ಎಂಟತ್ತು ದಿನಗಳು ಬೇಕು, ಆನಂತರ ಅವರು ಇದರ ಬಗ್ಗೆ ಮಾತನಾಡುತ್ತಾರೆ” ಎಂದರು.

ಎಫ್‌ಐಆರ್ ಹಾಕಲು ತಡವಾದ ಕಾರಣಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ ಎಂದಾದರೆ ಗಲಭೆಕೋರರ ಮನಸ್ಥಿತಿ ಎಂತಹದ್ದು ಎಂದು ಕೇಳಿದಾಗ, “ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಗಲಭೆಯಲ್ಲಿ ಉಂಟಾದ ಹಾನಿಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಕ್ಯಾಮೆರಾದಲ್ಲಿ ದಾಖಲಾದ ವಿವರಗಳನ್ನು ಸಂಗ್ರಹಿಸುತ್ತಿದ್ದು, ತಪ್ಪು ಮಾಡಿದ ಎಲ್ಲರ ಮೇಲೆಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದರು.

ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, “ಅವರು ದೊಡ್ಡವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರೆಲ್ಲಾ ಪಕ್ಷದ ಹಿರಿಯ ನಾಯಕರು ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ” ಎಂದು ಹೇಳಿದರು.

“ನೀರಿನ ದರ ಏರಿಕೆ ಮಾಡಿ 14 ವರ್ಷವಾಗಿದೆ. ಅದಕ್ಕೆ ಲೀಟರ್ ಗೆ 1 ಪೈಸೆಯಷ್ಟು ದರ ಏರಿಕೆ ಪ್ರಸ್ತಾವನೆ ನನ್ನ ಮುಂದೆ ಬಂದಿದೆ. ಪರಿಶೀಲನೆ ಮಾಡಿ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.

ಸಣ್ಣ ಕೈಗಾರಿಕೆ, ಉದ್ಯಮಗಳಿಗೂ ಪ್ರೋತ್ಸಾಹ

ಇನ್ವೆಸ್ಟ್ ಕರ್ನಾಟಕ 2025 ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸ್ಥಳೀಯವಾಗಿ ರೊಟ್ಟಿ, ಖಾರದ ಪುಡಿ ಸೇರಿದಂತೆ ಆಹಾರ ಉತ್ಪನ್ನಗಳು, ಇತರೇ ಸಣ್ಣ ಕೈಗಾರಿಕೆಳಿಗೆ ಆರ್ಥಿಕವಾಗಿ ಶಕ್ತಿ ನೀಡುವುದು ನಮ್ಮ ಜವಾಬ್ದಾರಿ. ಸರ್ಕಾರ ನೀಡಿದ ಸಹಾಯಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಅಷ್ಟೇ. ಅವರು ಬದುಕಬೇಕು ರಾಜ್ಯವೂ ಬದುಕಬೇಕು. ದೊಡ್ಡ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಂತೆ ಸಣ್ಣ ಪ್ರಮಾಣದ ಗೃಹ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಇದರಿಂದ ಪ್ರತಿ ಊರಿನಲ್ಲೂ 50 ರಿಂದ 100 ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments