Homeಕರ್ನಾಟಕಪುಂಡಾನೆ ದಾಳಿಗೆ ಇಬ್ಬರು ಸಾವು, ಸೆರೆಗೆ ಅಧಿಕಾರಿಗಳಿಗೆ ಸೂಚನೆ: ಈಶ್ವರ ಖಂಡ್ರೆ

ಪುಂಡಾನೆ ದಾಳಿಗೆ ಇಬ್ಬರು ಸಾವು, ಸೆರೆಗೆ ಅಧಿಕಾರಿಗಳಿಗೆ ಸೂಚನೆ: ಈಶ್ವರ ಖಂಡ್ರೆ

ಚಿಕ್ಕಮಗಳೂರು ಜಿಲ್ಲೆ, ಎನ್.ಆರ್.ಪುರ ತಾಲೂಕು ಬಾಳೆ ಹೊನ್ನೂರು ಬಳಿ 4 ದಿನಗಳ ಅಂತರದಲ್ಲಿ ಇಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬದವರಿಗೆ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಅವರು ಪ್ರಾರ್ಥಿಸಿದ್ದಾರೆ.

ಮೃತರ ಹತ್ತಿರದ ಬಂಧುಗಳಿಗೆ ನಿಯಮಾನುಸಾರ ಪರಿಹಾರ ನೀಡಲು ಮತ್ತು ಆನೆಗಳನ್ನು ಕಾಡಿಗೆ ಮರಳಿಸಲು ಮತ್ತು ಪುಂಡಾನೆ ಸೆರೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನರು ಕೂಡ ಆನೆಗಳ ಸಂಚಾರ ಇದೆ ಎಂಬ ಮಾಹಿತಿ ದೊರೆತ ಬಳಿಕ ಮುಂಜಾನೆ ಮತ್ತು ಕತ್ತಲಾದ ಬಳಿಕ ಎಚ್ಚರದಿಂದ ಇರಬೇಕು ಎಂದೂ ಮನವಿ ಮಾಡಿದ್ದಾರೆ.

ಯಾದಗಿರಿ ಪ್ರವಾಸದ ವೇಳೆ ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವರು ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳ ಮೇಲೆ ಉನ್ನತಾಧಿಕಾರಿಗಳು ಸತತ ನಿಗಾ ಇಟ್ಟು, ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು ಸೂಚನೆ ನೀಡಿದ್ದಾರೆ.

“ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ಕೂಡಲೇ ಅರಣ್ಯಾಧಿಕಾರಿಗಳು ಕ್ರಮ ವಹಿಸಬೇಕು. ಸ್ಥಳೀಯರಿಗೆ ಮಾಹಿತಿ ನೀಡಬೇಕು. ಆನೆಗಳನ್ನು ಕಾಡಿಗೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಕೆರೆ, ಕಟ್ಟೆಗಳು ತುಂಬಿವೆ. ಕಾಡಿನಲ್ಲಿ ಹುಲ್ಲು, ಸೊಪ್ಪು, ತೊಗಟೆ ಇತ್ಯಾದಿ ಆಹಾರ ಲಭ್ಯವಿದ್ದರೂ ಆನೆಗಳು ಏಕೆ ನಾಡಿಗೆ ಬರುತ್ತಿವೆ ಎಂಬ ಬಗ್ಗೆ ಅಧಿಕಾರಿಗಳು ಗಮನ ಹರಿಸಿ, ಮುಂದೆ ಈ ರೀತಿ ಅನಾಹುತ ಸಂಭವಿಸದಂತೆ ಕ್ರಮ ವಹಿಸಬೇಕು” ಎಂದು ಹೇಳಿದ್ದಾರೆ.

“ಆನೆ ಕಂದಕಗಳು ಸತತ ಮಳೆಯಿಂದ ಮುಚ್ಚಿಹೋಗಿವೆ, ಸೌರ ತಂತಿ ಬೇಲಿ, ಟೆಂಟಕಲ್ ಫೆನ್ಸಿಂಗ್ ಮರಬಿದ್ದು ಸಂಪರ್ಕ ಕಡಿದುಕೊಂಡಿವೆ ಎಂಬ ದೂರುಗಳಿವೆ. ಕೂಡಲೇ ಇವುಗಳ ನಿರ್ವಹಣೆ ಮಾಡಬೇಕು. ಅರಣ್ಯ ಗಸ್ತು ಸಿಬ್ಬಂದಿ ಈ ಬಗ್ಗೆ ನಿರಂತರವಾಗಿ ನಿಗಾ ಇಟ್ಟು, ಉನ್ನತಾಧಿಕಾರಿಗಳಿಗೆ ವರದಿ ಮಾಡಿ ದುರಸ್ತಿ ಮಾಡಿಸಬೇಕು. ಆನೆಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕಾಮಗಾರಿ ಆರಂಭಿಸಿ, ನಿಗದಿತ ಕಾಲಮಿತಿಯಲ್ಲಿ ಕಾಮಾಗಾರಿ ಪೂರ್ಣಗೊಳಿಸಿ ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮುಂದಾಗಬೇಕು” ಎಂದು ಸೂಚಿಸಿದ್ದಾರೆ.

“ಇಷ್ಟು ವರ್ಷಗಳ ಕಾಲ ಆನೆ ಸಮಸ್ಯೆಯೇ ಇಲ್ಲದ ಪ್ರದೇಶಗಳಲ್ಲೂ ಈಗ ಆನೆ-ಮಾನವ ಸಂಘರ್ಷ ಹೆಚ್ಚಳವಾಗುತ್ತಿದೆ. ಯಾವ ಕಾರಣದಿಂದ ಸಂಘರ್ಷ ವಿಸ್ತರಣೆ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿ. ಹೊಸ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸಿಕೊಂಡಾಗ ನೆರೆಯ ಜಿಲ್ಲೆಯ ಆನೆ ಕ್ಷಿಪ್ರಕಾರ್ಯಪಡೆ ಸಿಬ್ಬಂದಿಯ ನೆರವು ಪಡೆದು ಆನೆಗಳನ್ನು ಕಾಡಿಗೆ ಮರಳಿಸಬೇಕು. ಪುಂಡಾನೆ ಇದ್ದರೆ ಸೆರೆ ಹಿಡಿಯಬೇಕು” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

“ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸಲು ಮತ್ತು ಅವರೆಲ್ಲರಿಗೂ ಅಪಾಯ ಭತ್ಯೆ ಆಹಾರ ಭತ್ಯೆ ಸಕಾಲದಲ್ಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸೂಚಿಸಿದ ಸಚಿವರು ಈ ಬಗ್ಗೆ ಇನ್ನು ಮುಂದೆ ದೂರು ಬಂದರೆ, ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು” ಎಂದು‌ ಸಭೆಯಲ್ಲಿ ಎಚ್ಚರಿಸಿದ್ದಾರೆ.

ವರ್ಚುವಲ್ ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಉನ್ನತಾಧಿಕಾರಿಗಳಾದ ಮನೋಜ್ ರಾಜನ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments