Homeಕರ್ನಾಟಕಪ್ರತಿ ತಾಲೂಕು ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞರ ನೇಮಕ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಪ್ರತಿ ತಾಲೂಕು ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞರ ನೇಮಕ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಎಂಟು ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವೃಂದದ ಸಿಬ್ಬಂದಿ/ನೌಕರರ ವರ್ಗಾವಣೆಯನ್ನ ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನ ಆರೋಗ್ಯಸೌಧದಲ್ಲಿ ಇಂದು ಸುದ್ದಿಗೋಷ್ಠಿ  ಮಾತನಾಡಿದ ಸಚಿವರು, “ಈ ಬಾರಿಯ ಕೌನ್ಸಲಿಂಗ್ ನಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನ ಒದಗಿಸಿಕೊಡಲಾಗಿದೆ” ಎಂದರು.

“ತಾಲೂಕು ಆಸ್ಪತ್ರೆಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಈ ಬಾರಿ ನಡೆದ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ದೀರ್ಘಕಾಲದಿಂದ ಖಾಲಿಯಿದ್ದ ಹುದ್ದೆಗಳ ಭರ್ತಿಗೆ ಆಧ್ಯತೆ ನೀಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ವರ್ಗಾವಣೆ ಪ್ರಕ್ರಿಯೆ ಮಾಡಲಾಗಿದೆ. ಅಲ್ಲದೇ ವಿಶೇಷವಾಗಿ ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ಇಬ್ಬರು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರವಳಿಕೆ ತಜ್ಞರು ನೇಮಕ ಮಾಡಲು ಕ್ರಮ ವಹಿಸಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಲಾಗುವುದು. ಇದರಿಂದಾಗಿ ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ವೈದ್ಯರು ಲಭ್ಯತೆಯಿರಲಿದೆ” ಎಂದು ಹೇಳಿದರು.‌

“ಇಲಾಖೆಯಲ್ಲಿ ವೈದ್ಯರ ಕೊರೆತ ಇರುವುದರಿಂದ ಕೆಲವು ಕಡೆ ಹುದ್ದೆ ಭರ್ತಿಯಾಗಿರಲಿಲ್ಲ. ಈ ಬಾರಿಯ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಇದನ್ನು ಸರಿಪಡಿಸಲಾಗಿದೆ. ಕೆಲವು ಕಡೆ ಈಗಾಗಲೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳವುದಕ್ಕೆ ತಿಳಿಸಲಾಗಿದೆ. 2 ಸಾವಿರ ಎಂಬಿಬಿಎಸ್ ವೈದ್ಯರು, 185 ತಜ್ಞ ವೈದ್ಯರ ಕೊರತೆ ಇದೆ. ಇದನ್ನು ಸರಿದೂಗಿಸಲು ಸರಕಾರಿ ವೈದ್ಯಕೀಯ ಸೀಟು ಪಡೆದ ಎಂಬಿಬಿಎಸ್, ಎಂಡಿ ವೈದ್ಯಕೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಸಮಾಲೋಚನಾ ವಿಧಾನದ ಮೂಲಕ

“2011ರಲ್ಲಿಯೇ ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಕಾಯ್ದೆ ತರಲಾಗಿತ್ತು. ಆದರೆ ಇದುವರೆಗೂ ಈ ವಿಧಾನದ ಅನುಸರಿಸಿರಲಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ತಪ್ಪಿಸಿ ಪಾರದರ್ಶಕ ವರ್ಗಾವಣೆಯನ್ನು ಈ ಬಾರಿ ಆರೋಗ್ಯ ಇಲಾಖೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಜೂ.19 ರಿಂದ ಜು.3ರವೆರೆಗೆ ನಡೆದ ಆರೋಗ್ಯ ಇಲಾಖೆ ವರ್ಗಾವಣೆ ಪ್ರಕ್ರಿಯೆಯಲ್ಲಿ 5676 ಅಧಿಕಾರಿ ಮತ್ತು ಸಿಬ್ಬಂದಿ ಹೊಸ ಕಾರ್ಯಕ್ಷೇತ್ರವನ್ನು ಪಡೆದುಕೊಂಡಿದ್ದಾರೆ. ಗ್ರೂಪ್ ಎ ವಿಭಾಗದಲ್ಲಿ 21, ಗ್ರೂಪ್ ಬಿನಲ್ಲಿ 15, ಗ್ರೂಪ್ ಸಿನಲ್ಲಿ 4046 ಸಿಬ್ಬಂದಿ ಹಾಗೂ ಗ್ರೂಪ್ ಡಿನಲ್ಲಿ 680 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ” ಎಂದರು.

“ಆಯುಷ್ ಇಲಾಖೆಯಲ್ಲಿ 235 ಅಧಿಕಾರಿ ಮತ್ತು ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಈ ಪೈಕಿ 131 ಎ ಗ್ರೂಪ್ ಹುದ್ದೆಗಳು, 9 ಬಿ ಗ್ರೂಪ್ ಹುದ್ದೆಗಳು, 62 ಸಿ ಗ್ರೂಪ್ ಹುದ್ದೆಗಳು ಹಾಗೂ 33 ಡಿ ಗ್ರೂಪ್ ಹುದ್ದೆಗಳಿವೆ. ಆಹಾರ ಮತ್ತು ಸುರಕ್ಷತಾ ಇಲಾಖೆಯಲ್ಲಿ ಗ್ರೂಪ್ ಎನಲ್ಲಿ 12, ಗ್ರೂಪ್ ಬಿ ನಲ್ಲಿ 16 ಮತ್ತು ಗ್ರೂಪ್ ಸಿ ನಲ್ಲಿ 17 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಆಯುಷ್ ಇಲಾಖೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವ ನಿಟ್ಟಿನಲ್ಲಿ 12 ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಾಧಿಕಾರಿಗಳಿಗೆ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವೇತನ ದೊರೆಯುತ್ತಿದೆ

“ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ಪ್ರೋತ್ಸಾಹಧನ ದೊರೆಯುತ್ತಿದೆ. ರಾಜ್ಯ ಸರ್ಕಾರ 5 ಸಾವಿರ ಖಚಿತ ಪ್ರೋತ್ಸಾಹ ಧನ ನೀಡುತ್ತಿದೆ. ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 60:40 ರ ಅನುಪಾತದಲ್ಲಿ ರಾಜ್ಯಸರ್ಕಾರದ ಪಾಲುದಾರಿಕೆಯೊಂದಿಗೆ 1500 ಪ್ರೋತ್ಸಾಹಧನ ಹೆಚ್ವಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಖಚಿತ ಪ್ರೋತ್ಸಾಹಧನ 10 ಸಾವಿರ ದಾಟಲಿದ್ದು, ಕಾರ್ಯಕರ್ತೆಯರು ನಡೆಸುವ ಕಾರ್ಯಗಳಿಗೆ ನೀಡುವ ಇನ್ಸೆಂಟಿವ್ ಲೆಕ್ಕ ಹಾಕಿದರೆ 12 ರಿಂದ 13 ಸಾವಿರದ ವರೆಗೆ ಆಶಾ ಕಾರ್ಯಕರ್ತೆಯರಿಗೆ ವೇತನ ದೊರೆಯಲಿದೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಿಳಿಹೇಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments