ಮಾಲೂರು ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗಾಗಿ ದಾನ ಮಾಡಿದ್ದ 50 ಎಕರೆ ಜಮೀನನ್ನು ಎರಡು ಕಂಪನಿಗಳು ಲೂಟಿ ಮಾಡಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ದುರಾಡಳಿತ ಶುರುವಾಗಿ ಮೂರು ವರ್ಷವಾಗಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜವಾನನಿಂದ ಆರಂಭವಾಗಿ ಪ್ರಧಾನ ಕಾರ್ಯದರ್ಶಿವರೆಗೂ ಅಕ್ರಮ ನಡೆಯುತ್ತಿದೆ. ಹಣ ಕೊಡದೆ ಯಾರಿಗೂ ವರ್ಗಾವಣೆ, ಬಡ್ತಿ ನೀಡುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಸರ್ಕಾರದ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ಸಚಿವರು ಹಾಗೂ ಪ್ರಭಾವಿಗಳು ಪಿ ನಂಬರ್‌ಗಳ ಜಮೀನುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ” ಎಂದು ದೂರಿದರು.
“ಶಿಡ್ಲಘಟ್ಟ, ಚಿಂತಾಮಣಿ ಮೊದಲಾದ ಭಾಗಗಳಲ್ಲಿ ಕಡಿಮೆ ದರದಲ್ಲಿ ಜಮೀನುಗಳನ್ನು ಜನರಿಂದ ಪಡೆದು ಕೈಗಾರಿಕೆ ಸ್ಥಾಪಿಸುತ್ತೇವೆ, ಉದ್ಯೋಗ ಕೊಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 20 ಕಿ.ಮೀ. ಸುತ್ತಳತೆಯಲ್ಲಿ ಜಮೀನು ಪಡೆಯುತ್ತಿದ್ದಾರೆ” ಎಂದು ಆರೋಪಿಸಿದರು.
“ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆಯಲ್ಲಿ ರೈತರು ಕೃಷಿ ಮಾಡಲು ಫಲವತ್ತಾದ ಭೂಮಿ ಸಿಗುತ್ತಿಲ್ಲ. ಇನ್ನು ಶಿಡ್ಲಘಟ್ಟ, ಚಿಂತಾಮಣಿಯಲ್ಲೂ ಕೃಷಿಗೆ ಭೂಮಿ ದೊರೆಯುವುದಿಲ್ಲ. ಜಂಗಮಕೋಟೆಯಲ್ಲಿ ಎರಡೂವರೆ ಸಾವಿರ ಎಕರೆ ಜಮೀನುಗಳನ್ನು ಸ್ವಾಧೀನ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ರಾಯಲಸೀಮೆ ಹಾಗೂ ವೈಜಾಗ್‌ನಲ್ಲಿ ಕೈಗಾರಿಕೆಗಳನ್ನು ಆರಂಭಿಸುತ್ತಿದ್ದಾರೆ. ಕೈಗಾರಿಕೆ ಅಭಿವೃದ್ಧಿ ಮಾಡಲು ಚಂದ್ರಬಾಬು ನಾಯ್ಡು ಅವರನ್ನು ಮಾದರಿಯಾಗಿಸಿಕೊಳ್ಳಬಹುದು. ಆದರೆ ಚಿಕ್ಕಬಳ್ಳಾಪುರದ ಹಳ್ಳಿಗಳನ್ನು ಸರ್ಕಾರ ಹಾಳು ಮಾಡುತ್ತಿದೆ. ಇವರೇ ಜಮೀನು ಪಡೆದು ಕೆಐಎಡಿಬಿಗೆ ನೀಡಿ ಕಪ್ಪುಹಣವನ್ನು ಬಿಳಿ ಹಣ ಮಾಡುತ್ತಿದ್ದಾರೆ. 50-60 ಲಕ್ಷ ರೂ. ಗೆ ರೈತರಿಂದ ಜಮೀನು ಪಡೆದು ಅದನ್ನು ಒಂದು ಕೋಟಿ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ನೂರು ವರ್ಷದಿಂದ ಜಮೀನು ಇಟ್ಟುಕೊಂಡಿರುವ ರೈತರಿಗೆ 50 ಲಕ್ಷ ರೂ. ನೀಡಿ ಖರೀದಿ ಮಾಡುವ ಜನಪ್ರತಿನಿಧಿಗಳು ಮೂರೇ ತಿಂಗಳಲ್ಲಿ ಒಂದು ಕೋಟಿ ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲ” ಎಂದರು.
ಮಾಲೂರಿನಲ್ಲಿ ಹಗಲು ದರೋಡೆ
“ಸಮಾಜ ಸೇವಕ ಟಿ.ಜಿ.ಶ್ರೀನಿವಾಸುಲು ಎಂಬುವರು 1955-56 ರಲ್ಲಿ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಅಗಲಕೋಟೆ ಗ್ರಾಮದ ಸರ್ವೆ ನಂಬರ್ 2, 7, 8, 10, 18, 60, 61, 63, 64 ರ ಎಕರೆ ಜಮೀನನ್ನು ಶಿಕ್ಷಣ ಇಲಾಖೆಗೆ ದಾನ ಮಾಡಿದ್ದರು. ಇದನ್ನು ದಾನಪತ್ರದ ಮೂಲಕ ನೋಂದಣಿ ಮಾಡಿಸಿ ಶಾಲೆಗೆ ನೀಡಿದ್ದರು. ಬಡವರ ಮಕ್ಕಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಈ ಜಮೀನು ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಈ ಜಮೀನು ಬೇರೆ ಉದ್ದೇಶಕ್ಕೆ ಬಳಕೆಯಾಗಬಾರದು ಎಂದು ಪತ್ರ ಬರೆಯಲಾಗಿತ್ತು. ಆದರೆ ಇಲ್ಲಿ ಕೈಗಾರಿಕೆಗಳು ಆರಂಭವಾದ ಬಳಿಕ ರಿಯಲ್ ಎಸ್ಟೇಟ್ ಮಾಫಿಯಾ ಆರಂಭವಾಯಿತು. ಜೊತೆಗೆ ಭೂಗಳ್ಳರು ಬಂದು ಅಮಾಯಕರ ಜಮೀನುಗಳನ್ನು ಲಪಟಾಯಿಸಿದ್ದಾರೆ” ಎಂದು ವಿವರಿಸಿದರು.
“ಹೂಡಿಕೆದಾರರು, ಜನಪ್ರತಿನಿಧಿಗಳು ಹಾಗೂ ಭೂಗಳ್ಳರು ಸೇರಿಕೊಂಡು ಇಂತಹ ಕೆಲಸಗಳನ್ನು ಮಾಡಿದ್ದಾರೆ. ಅದೇ ರೀತಿ 50 ಎಕರೆಯ ಜಮೀನನ್ನು ಕಬಳಿಸಲಾಗಿದೆ. ಆರ್.ಗಂಗಾಧರ್ ಅವರ ನೇತೃತ್ವದ ಯುನೈಟೆಡ್ ಎಸ್ಟೇಟ್ಸ್ ಹಾಗೂ ಎಂ.ಪಂಚಾಕ್ಷರಯ್ಯ ಹಿರೇಮಠ್ ಅವರ ಯುನೈಟೆಡ್ ಗ್ರೀನ್ ವುಡ್ಸ್ ಸಂಸ್ಥೆಗೆ ಈ ಜಮೀನು ನೀಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ನಂತರವೂ ಸರ್ಕಾರ ಕ್ರಮ ವಹಿಸಿಲ್ಲ. ಸರ್ಕಾರಕ್ಕೆ ಹೊಸ ಶಾಲೆ ನಿರ್ಮಿಸಬೇಕು, ತರಗತಿ ನೀಡಬೇಕೆಂಬ ಬದ್ಧತೆ ಇಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 9,000 ತರಗತಿ ಕೊಠಡಿಗಳನ್ನು ನೀಡಿದ್ದರು. ಬಳಿಕ ಈ ಮೂರು ವರ್ಷದಲ್ಲಿ ಹೊಸ ಕೊಠಡಿಗಳನ್ನು ನೀಡಿಲ್ಲ. ಆದರೆ ಸರ್ಕಾರಿ ಶಾಲೆಗೆ ನೀಡಿದ ಜಮೀನನ್ನು ಕಬಳಿಸಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರು ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಚಿವ ಕೃಷ್ಣ ಭೈರೇಗೌಡರು ಕೂಡಲೇ ಅಧಿಕಾರಿಗಳ ಜೊತೆ ಚರ್ಚಿಸಿ ಇದನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವರು ತಪ್ಪಿತಸ್ಥರನ್ನು ಪತ್ತೆ ಮಾಡಿ, ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಶಿಕ್ಷಣ ಇಲಾಖೆಯ ಆಯುಕ್ತರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಜಮೀನಿನ ಎಲ್ಲ ದಾಖಲೆಗಳನ್ನು ಪಡೆದು ಜಮೀನು ಮಂಜೂರಾತಿಯನ್ನು ರದ್ದು ಮಾಡಬೇಕು” ಎಂದು ಆಗ್ರಹಿಸಿದರು.
“ಜಮೀನುಗಳ ಹಗಲು ದರೋಡೆ ಮಾಲೂರಿನಿಂದ ಆರಂಭವಾಗಿದೆ. ನಾನು ಈ ಭಾಗಕ್ಕೆ ಬರುತ್ತೇನೆಂದು ತಿಳಿದ ಕೂಡಲೇ ಕೆಲವು ಪ್ರಭಾವಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ಇಂತಹ ಬೆಲೆಬಾಳುವ ಜಮೀನನ್ನು ವಾಪಸ್ ಪಡೆದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಇಲ್ಲಿ ಶಿಕ್ಷಣ ಸಂಸ್ಥೆ ತರುವ ಪ್ರಯತ್ನ ಮಾಡುತ್ತೇನೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಸಂಸತ್ತಿನ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇನೆ” ಎಂದರು.


