ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಶಾಶ್ವತ ಕ್ರಸ್ಟ್‌ಗೇಟ್ ನಿರ್ಮಾಣಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ. ಸದ್ಯ ಜಲಾಶಯದ ನೀರನ್ನು ಹಿಡಿದಿಟ್ಟುಕೊಳ್ಳುವುದೇ ಆದ್ಯತೆಯಾಗಿದ್ದು, ಹೀಗಾಗಿ 19ನೇ ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚಿ ಅಲ್ಲಿ ನೀರು ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ‘ಸ್ಟಾಪ್ ಲಾಗ್ ಗೇಟ್’ ಅಳವಡಿಸಲು ನಿರ್ಧರಿಸಲಾಗಿದೆ.
ಹೊಸ ಗೇಟ್ ಅಳವಡಿಸಲು ಜಲಾಶಯದ ನೀರನ್ನು ಬಹುತೇಕ ಅರ್ಧದಷ್ಟು ಖಾಲಿ ಮಾಡುವ ಪ್ರಯತ್ನ ನಡೆದಿದೆ. ಕಲಾಶಯದ ನೀರಿನ ಪ್ರಮಾಣ ನೋಡಿದರೆ ಸದ್ಯ ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕ ‘ಸ್ಟಾಪ್ ಲಾಗ್ ಗೇಟ್’ ಮಾತ್ರ ಅಳವಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಗೇಟ್ ತಯಾರಿಸಲು ಸೂಚಿಸಲಾದ ಕಂಪನಿಯ ಕಚೇರಿ ಇರುವುದು ಹೊಸಪೇಟೆಯಲ್ಲಾದರೂ ನಿರ್ಮಾಣ ಶೆಡ್ ಇರುವುದು ಕೊಪ್ಪಳ ಜಿಲ್ಲೆಯ ಹೊಸಹಳ್ಳಿ ಸಮೀಪ. ಅಲ್ಲಿ ಈಗಾಗಲೇ ಗೇಟ್ ತಯಾರಿಗೆ ಸಿದ್ಧತೆ ಆರಂಭವಾಗಿದೆ. ಜಲಾಶಯದ ನೀರು 50 ಟಿಎಂಸಿ ಅಡಿಗೆ ಕುಸಿದಂತೆ ಈ ಗೇಟ್ ಸಹ ಸಿದ್ದವಾಗಲಿದೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋದ ಪರಿಣಾಮ ನದಿಗೆ ನೀರು ಬಿಡಲಾಗಿದ್ದು,
ಸೋಮವಾರ ಬೆಳಗಿನ ಮಾಹಿತಿ ಪ್ರಕಾರ ಜಲಾಶಯದ ಹೊಳಹರಿವು 25,131 ಕ್ಯುಸೆಕ್ ಇದ್ದು, 88,955 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕ್ರಸ್ಟ್‌ಗೇಟ್ ಮರಳಿ ಅಳವಡಿಸಬೇಕಾದ ಹಿನ್ನೆಲೆಯಲ್ಲಿ ಜಲಾಶಯದ 61 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ. ಇತ್ತೀಚೆಗೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು.
ಸಂಚಾರ ನಿರ್ಬಂಧ
ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ವಿಜಯನಗರ ಜಿಲ್ಲೆಯ ಕಂಪ್ಲಿ ನಡುವೆ ಸಂಪರ್ಕ ಬೆಸೆಯುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಹಾಗೂ ಪಾದಚಾರಿಗಳ ಸಂಚಾರ ನಿರ್ಬಂಧ ವಿಸ್ತರಣೆಯಾಗಿದೆ.
ವಿರೋಧ ಪಕ್ಷಗಳ ನಾಯಕರ ಭೇಟಿ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸೋಮವಾರ ಮಧ್ಯಾಹ್ನ ಅಣೆಕಟ್ಟೆಗೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ ಸಹ ಭೇಟಿ ನೀಡುವ ಸಾಧ್ಯತೆ ಇದೆ.
ಮಂಡಳಿಯ ಅಧಿಕಾರಿಗಳೂ ಭೇಟಿ
ತುಂಗಭದ್ರಾ ಮಂಡಳಿಯ ಅಧ್ಯಕ್ಷರು, ಕೇಂದ್ರೀಯ ಜಲ ಆಯೋಗದ ಸದಸ್ಯರು ಸೋಮವಾರ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.